Untitled Document
Sign Up | Login    
ರಾಮಾಯಣ
ಮಹರ್ಷಿ ವಾಲ್ಮೀಕಿಯಿಂದ ಆದಿಕಾವ್ಯ ರಚನೆ
ರಕ್ತದ ಮಡುವಿನಲ್ಲಿ ಬಿದ್ದ ಗಂಡು ಕ್ರೌಂಚ ಪಕ್ಷಿ

ಶೋಕವೇ ಶ್ಲೋಕವಾಗಿ ಹರಿಯಿತು
ಮುನಿ ವಾಲ್ಮೀಕಿಯ ಮನವನು ಕಲಕಿದ
ಗಾಢದಶೋಕವು ಮಡುಗಟ್ಟಿ.
ಶ್ಲೋಕದ ರೂಪದಿ ಚಿಳ್ಳನೆ ಚಿಮ್ಮಿತು
ಒರೆದನು ರಾಮಾಯಣ ಕಟ್ಟಿ.

ನಾರದರನ್ನು ಬೀಳ್ಕೊಂಡ ಮೇಲೆ ಎಷ್ಟೋ ಹೊತ್ತಿನ ತನಕ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಧ್ಯಾನದಲ್ಲೇ ತಲ್ಲೀನರಾಗಿದ್ದರು. ಮರ್ಯಾದಾ ಪರುಷೋತ್ತಮನ ಮನೋಹರವಾದ ಚರಿತ್ರೆಯೇ ಅವರ ಮನಸ್ಸಿನ ಪರದೆಯ ಮೇಲೆ ನಲಿಯುತ್ತಿತ್ತು. ಆಗಲೇ ಮಾಧ್ಯಾಹ್ನಿಕದ ಸಮಯವಾಯಿತು. ಶಿಷ್ಯ ಭರದ್ವಾಜ ಹಾಗೂ ಇತರ ಶಿಷ್ಯರೊಂದಿಗೆ ಸ್ನಾನ ಆಹ್ನಿಕ ಪೂರೈಸುವ ಸಲುವಾಗಿ ತಮಸಾ ನದೀ ತೀರಕ್ಕೆ ಬಂದರು. ನದಿ ಇಂಪಾದ ಕಲಕಲ ನಾದದೊಂದಿಗೆ ಹರಿಯುತ್ತಿತ್ತು. ಸುತ್ತಲೂ ರಮಣೀಯವಾದ ನಿಸರ್ಗ ಸೌಂದರ್ಯ ರಾರಾಜಿಸುತ್ತಿತ್ತು. ಗಿಡಮರಗಳಿಂದ ಕೂಡಿದ ಹಚ್ಚ ಹಸಿರಿನ ಮನೋಹರವಾದ ವನ. ವಿವಿಧ ಪಕ್ಷಿಗಳ ಮಧುರಸ್ವನ. ಅದರ ಅಂದವನ್ನು ಹೆಚ್ಚಿಸಲೋಸುಗವೋ ಎಂಬಂತೆ ಪ್ರಣಯ ಮಗ್ನವಾಗಿರುವ ಗಂಡು ಹೆಣ್ಣು ಕೌಂಚ ಪಕ್ಷಿಗಳು. ಆಗೀಗ ಬೀಸಿಬರುವ ಮಂದಾನಿಲ.

ಯಾವುದೋ ಅಲೌಕಿಕ ಕಥೆಯನ್ನು ಹೇಳುವಂತಿರುವ ರಮಣೀಯವಾದ ನಿಸರ್ಗಸೌಂದರ್ಯ! ಇದನ್ನೆಲ್ಲ ಸವಿಯುತ್ತ ವಾಲ್ಮೀಕಿಗಳು ಸ್ನಾನಕ್ಕೆ ಇಳಿಯಬೇಕು ಅನ್ನುವಷ್ಟರಲ್ಲಿ ದುರಂತವೊಂದು ಜರುಗಿ ಹೋಯಿತು. ಬೇಡನೊಬ್ಬ ಪ್ರಣಯ ಮಗ್ನವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದಾದ ಗಂಡು ಪಕ್ಷಿಯನ್ನು ಬಾಣದಿಂದ ಹೊಡೆದು ಉರುಳಿಸಿಬಿಟ್ಟನು. ರಕ್ತದ ಮಡುವಿನಲ್ಲಿ ಗತಪ್ರಾಣವಾಗಿಬಿದ್ದ ಆ ಗಂಡು ಪಕ್ಷಿಯ ಮೇಲೆ ಹೆಣ್ಣು ಕ್ರೌಂಚ ಬಿದ್ದು ಹೊರಳಾಡುತ್ತ ವಿಲಾಪಿಸುತ್ತಿರುವ ದೃಶ್ಯ ಅತ್ಯಂತ ಹೃದಯವಿದ್ರಾವಕವಾಗಿತ್ತು. ಮನಕಲಕುವ ಈ ನೋಟದಿಂದ ವಾಲ್ಮೀಕಿಗಳ ಹೃದಯದಲ್ಲಿ ಶೋಕ ಮಡುಗಟ್ಟಿತು. ಆಗ ಅವರಿಗರಿವಿಲ್ಲದಂತೆಯೆ ಅವರ ಬಾಯಿಂದ ಈ ಮಾತು ಹೊರಬಂದಿತು:

ಮಾ ನಿಷಾದ ಪ್ರತಿಷ್ಠಾಂತ್ವಂ ಅಗಮಃ ಶಾಶ್ವತೀಃ ಸಮಾಃ |
ಯತ್ಕ್ರೌಂಚ ಮಿಥುನಾದೇಕಂ ಅವಧೀಃ ಕಾಮಮೋಹಿತಮ್ ||

ಎಲವೋ ಬೇಡನೆ, ಪ್ರಣಯದಿ ನಿರತ
ಕ್ರೌಂಚದ ದಂಪತಿಯಲಿ ಒಂದು
ಗಂಡನು ಕೊಂದೆಯೊ ಬಹುದಿನ ನೀನು
ಬದುಕುವುದಿಲ್ಲ ಈ ಮುಂದು.

ವಾಲ್ಮೀಕಿ ಮಹರ್ಷಿಗಳು ಉದ್ಗರಿಸಿದ ಈ ಮಾತು ಕೇವಲ ಗದ್ಯರೂಪದಲ್ಲಿ ಪಡಿಮೂಡಿರಲಿಲ್ಲ, ಬದಲಿಗೆ ಅದೊಂದು ಛಂದೋಬದ್ಧವಾದ ಕಾವ್ಯ ರೂಪದಲ್ಲಿತ್ತು. ತಂತಿ ವಾದ್ಯದಲ್ಲಿ ಮಂಜುಳವಾಗಿ ಹಾಡಬಹುದಾದ ಲಯ-ತಾಳ-ಮೇಳಗಳಿಗೆ ಅನುಗುಣವಾದ ರೀತಿಯಲ್ಲಿರುವ ಅನುಷ್ಟುಪ್ ಛಂದಸ್ಸಿನಲ್ಲಿ ಉಕ್ಕಿದ ರಾಮಾಯಣ ಮಹಾನದಿಯ ಗಂಗೋತ್ರಿಯಾಗಿತ್ತು. ಶಿಷ್ಯ ಭರದ್ವಾಜನೊಂದಿಗೆ ವಾಲ್ಮೀಕಿಗಳು 'ನೋಡಿದೆಯ ಭರದ್ವಾಜ, ಅಪರಾಧವೆಸಗಿ ಪಾಪಿಯೆನಿಸಿದ ವ್ಯಾಧನಿಗೆ ಶಾಪ ನೀಡಿದೆ. ರಕ್ತದ ಮಡುವಿನಲ್ಲಿ ಮಡಿದುಬಿದ್ದ ಗಂಡು ಕ್ರೌಂಚಪಕ್ಷಿ, ಅದರಮೇಲೆ ಹೊರಳಾಡುತ್ತಿರುವ ದುಃಖಾರ್ತ ಹೆಣ್ಣಿನ ಶೋಕವಿಲಾಪ ಕಂಡು ಮನಸ್ಸು ಶೋಕ ತಪ್ತವಾಯಿತು. ಆ ಶೋಕವೇ ಛಂದಸ್ಸಿನ ಚೌಕಟ್ಟಿನಲ್ಲಿ ಪದ್ಯರೂಪದಲ್ಲಿ ಹೊರಹೊಮ್ಮಿ ಬಂತು. ವೀಣೆಯ ಝೇಂಕಾರದೊಂದಿಗೆ ಇದನ್ನು ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಅದಕ್ಕಾಗಿ ಇದನ್ನು ’ಶ್ಲೋಕ’ ಎಂದು ಕರೆಯೋಣ' ಎಂದರು. ಅದು ವಿಶ್ವದ ಮೊಟ್ಟಮೊದಲ ಶ್ಲೋಕ ಎನಿಸಿತು. ಶಿಷ್ಯ ಭರದ್ವಾಜ ಅದನ್ನು ನೆನಪಿಟ್ಟುಕೊಂಡ.

ಸತ್ಯಲೋಕದಿಂದ ಬ್ರಹ್ಮದೇವರ ಆಗಮನ

ತರುವಾಯ ವಾಲ್ಮೀಕಿಗಳು ಋಷಿಗಳಿಂದ ಸೇವಿತವಾದ ನಿರ್ಮಲ ಜಲದ ತಮಸಾ ನದಿಯಲ್ಲಿ ಮಿಂದು, ಭಗವಾನ್ ಸೂರ್ಯದೇವನಿಗೆ ಅರ್ಘ್ಯವನ್ನಿತ್ತು , ದಂಡೆಯ ಮೇಲೆ ಆಹ್ನಿಕಾದಿ ಕಾರ್ಯವನ್ನು ಪೂರೈಸಿ, ಶಿಷ್ಯರೊಂದಿಗೆ ಆಶ್ರಮಕ್ಕೆ ಮರಳಿದರು.

ಆಶ್ರಮದಲ್ಲಿ ನಿತ್ಯದಂತೆ ವೇದ ಪಾರಾಯಣ, ಶಾಸ್ತ್ರ ಪಾಠಗಳೇ ಮೊದಲಾದ ಕಾರ್ಯಕ್ರಮಗಳು ಪ್ರಾರಂಭವಾದವು. ವಾಲ್ಮೀಕಿ ಮಹರ್ಷಿಗಳು ಬೋಧನೆ ಮಾಡುತ್ತ, ನಿರೀಕ್ಷಣೆ ಮಾಡುತ್ತ ಕಾರ್ಯಕ್ರಮಗಳು ನಿಶ್ಚಿತ ಕ್ರಮದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರೂ ಮನಸ್ಸಿನಲ್ಲಿ ತಮಸೆಯ ತೀರದಲ್ಲಿ ನಡೆದ ಘಟನೆಯೇ ಪುನರಾವರ್ತನೆಯಾಗುತ್ತ, ಅದರೊಂದಿಗೆ ಶ್ರೀರಾಮನ ಚರಿತೆಯೇ ತುಂಬಿಕೊಳ್ಳುತ್ತ ಅನ್ಯಮನಸ್ಕರಾಗಿದ್ದರು. ಅದೇ ಸಂದರ್ಭದಲ್ಲಿ ಬ್ರಹ್ಮದೇವರು ಸತ್ಯಲೋಕದಿಂದ ವಾಲ್ಮೀಕಿ ಆಶ್ರಮಕ್ಕೆ ಆಗಮಿಸಿದರು. ಅನಿರೀಕ್ಷಿತವಾಗಿ ವಿರಿಂಚಿಗಳು ಆಶ್ರಮಕ್ಕೆ ದಯಮಾಡಿಸಿ ದರ್ಶನ ನೀಡುತ್ತಿರುವುದರಿಂದ ಹರ್ಷಪುಲಕಿತರಾದ ವಾಲ್ಮೀಕಿಗಳು ಅವರನ್ನು ಆದರದಿಂದ ಕರೆತಂದು, ಪೂಜಿಸಿ, ಸ್ತುತಿಸಿ, ಫಲಾಹಾರ-ಕ್ಷೀರಾದಿ ಆರೋಗಣೆಯಿತ್ತು ಸತ್ಕರಿಸಿ ಬಂದಕಾರ್ಯವೇನೆಂದು ಸೂಚಿಸಬೇಕು ಎಂದು ವಿನಯಪೂರ್ವಕ ಬೇಡಿಕೊಂಡರು. ಮಹರ್ಷಿಗಳ ನಡವಳಿಕೆಯಿಂದ ಸುಪ್ರೀತರಾದ ಬ್ರಹ್ಮದೇವರು, ಪ್ರೀತಿಯಿಂದ ವಾಲ್ಮಿಕಿಗಳನ್ನು ಪಕ್ಕದಲ್ಲಿಯೇ ಕೂರಿಸಿಕೊಂಡು ನಸುನಗುತ್ತ ಹೇಳಿದರು ನನಗೆಲ್ಲವೂಗೊತ್ತು. ನೀನು ಮಧ್ಯಾಹ್ನ ನಡೆದ ಕರುಣಾರ್ದ್ರ ಪ್ರಸಂಗವನ್ನೇ ಮೆಲಕು ಹಾಕುತ್ತಿರುವಿಯಷ್ಟೆ? ಕ್ರೌಂಚ ಪಕ್ಷಿಯೊಳೊಂದು ಪಕ್ಷಿಯನ್ನು ವಧಿಸಿದ ಬೇಡನಿಗೆ ನೀನು ಉದ್ವಿಗ್ನನಾಗಿ ಶಾಪವಿತ್ತೆಯಷ್ಟೆ? ನಿನ್ನ ಗಾಢ ಶೋಕ ಅದ್ಭುತ ಛಂದೋಬದ್ಧ ಪದ್ಯವಾಗಿ ಹೊರಹೊಮ್ಮಿತು. ಅದನ್ನು ಶ್ಲೋಕವೆಂದು ಕರೆದೆ. ಅದು ಅತ್ಯಂತ ಸಮರ್ಪಕವಾಗಿದೆ. ಹಾಗೆ ಮಹಾನ್ ಶ್ಲೋಕವಾಗಿ ಹೊರಹೊಮ್ಮುವಂತೆ ಮಾಡಿದವನು ನಾನೇ. ಅದಕ್ಕೆ ಒಂದು ಮಹಾನ್ ಉದ್ದೇಶವೂ ಇದೆ.ಎಂದು ನುಡಿದು ಸ್ವಲ್ಪಹೊತ್ತು ನಿಂತು ಮುಂದರಿಸಿದರು.

'ಬೆಳಿಗ್ಗೆ ನಾರದರು ಬಂದು ಶ್ರೀರಾಮನ ಲೋಕೋತ್ತರವಾದ ಕಥೆಯನ್ನು ಕಿರಿದಾಗಿ ಹೇಳಿ ಹೋದರು. ಅದನ್ನು ನೀನು ವಿಸ್ತಾರವಾಗಿ ಇಡೀ ಲೋಕಕ್ಕೆ ಕಾವ್ಯದ ಮೂಲಕ ತಿಳಿಸು. ಶ್ರೀರಾಮನ ನಾರದರು ಹೇಳದೇ ಇರುವ ಸಂಗತಿಯೂ ನಿನಗೆ ತಿಳಿದುಬರುತ್ತದೆ. ಹಾಗೂ ಆತನ ಸಂಪೂರ್ಣ ಚರಿತ್ರೆಯು ನಿನ್ನಕಣ್ಣೆದುರಿಗೇ ಕಾಣುವಂತೆ, ಅಂಗೈ ನೆಲ್ಲಿಕಾಯಿಯಂತೆ ಗೋಚರಿಸುವಂತೆ ಮಾಡುತ್ತೇನೆ. ನೀನು ರಚಿಸುತ್ತ ಹೋಗು. ನಿನ್ನ ಕಾವ್ಯ ಮನೋಹರವಾಗಿಯೂ, ಅತ್ಯಂತ ಸುಲಭವಾದುದಾಗಿಯೂ ,ವಿಶ್ವಮಾನವ ಸಂದೇಶವನ್ನು ನೀಡುವುದಾಗಿಯೂ ಇರಲಿ. ನೀನು ರಚಿಸುವ ಆ ಮಹಾಕಾವ್ಯದಲ್ಲಿ ಅಸತ್ಯ ಸಂಗತಿಗೆ ಆಸ್ಪದವಿರುವುದಿಲ್ಲ. ಅತಿ ರಂಜಿತ ಹೇಳಿಕೆಯಿಂದ ನೀನು ಅಂತರ ಕಾಯ್ದುಕೊಳ್ಳುತ್ತೀಯೆ. ನಿನ್ನ ಆ ಮಹಾಕಾವ್ಯ ಆಚಂದ್ರಾರ್ಕವಾಗಿರುತ್ತದೆ. ಸಮುದ್ರವು ಅಲೆಗಳ ಚಾಮರವನ್ನು ಬೀಸುತ್ತಿರುವವವರೆಗೆ, ತಾರೆಗಳು ಮಿಂಚುತ್ತಿರುವ ತನಕ ಜನರು ಅದನ್ನು ಓದುತ್ತಿರುತ್ತಾರೆ. ಕೀರ್ತನಕಾರರು ಕೀರ್ತಿಸುತ್ತಿರುತ್ತಾರೆ, ಕವಿಗಳು ಬರೆಯುತ್ತಿರುತ್ತಾರೆ. ಹಗಲು ರಾತ್ರಿ ಆ ಕತೆಯನ್ನು ಹೇಳುತ್ತಿರುತ್ತಾರೆ ಮತ್ತು ಕೇಳುತ್ತಿರುತ್ತಾರೆ. ಅದು ಆದಿಕಾವ್ಯ ಎನಿಸುತ್ತದೆ..ನಿನಗೆ ಮಂಗಳವಾಗಲಿ..', ಎಂದು ಅನುಗ್ರಹಿಸಿ ಬ್ರಹ್ಮದೇವರು ಸತ್ಯಲೋಕಕ್ಕೆ ತೆರಳಿದರು.

ಶ್ರೀರಾಮನ ಆಸ್ಥಾನದಲ್ಲಿ ಲವಕುಶರು

ಬ್ರಹ್ಮದೇವರು ತೆರಳಿದ ಮೇಲೆ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ದಿವ್ಯ ಚರಿತೆಯನ್ನು ಮಹಾಕಾವ್ಯರೂಪದಲ್ಲಿ ರಚಿಸಲು ಉಪಕ್ರಮಿಸಿದರು. ಬ್ರಹ್ಮದೇವರ ಅನುಗ್ರಹದಿಂದಲೂ, ವಾಲ್ಮೀಕಿಗಳ ತಪಃಪ್ರಭಾವದಿಂದಲೂ ಶ್ರೀರಾಮನ ಜೀವನದ ಎಲ್ಲ ಘಟನೆಗಳೂ ಸುಸ್ಪಷ್ಟವಾಗಿ ಗೋಚರವಾಗುತ್ತ ಕಾವ್ಯ ಸ್ಫುರಣವಾಯಿತು. ಅಲ್ಲಿಯ ಪ್ರತ್ರಿಯೊಂದು ಪಾತ್ರದ ನಗು-ಅಳು, ದುಃಖ-ದುಮ್ಮಾನ, ಕೋಪ-ತಾಪ, ಪ್ರೀತಿ-ಸ್ನೇಹ, ದ್ವೇಷ-,ಮತ್ಸರ, ಜಗಳ-ತಂಟೆ, ಹುಟ್ಟು-ಸಾವು, ಮದುವೆ-ಮಾಂಗಲ್ಯ, ಸಂಕಿಚಿತತೆ-ದುರ್ಬೋಧನೆ, ತ್ಯಾಗ-ಬಲಿದಾನ, ಹಿಂಸೆ-ಕ್ರೌರ್ಯ, ಕುಯುಕ್ತಿ-ವಂಚನೆ, ಶೌರ್ಯ-ಪರಾಕ್ರಮ, ಅಧಿಕಾರ-ಅಂತಸ್ತು, ಯುದ್ಧ ಮತ್ತು ಶಾಂತಿ ಹೀಗೆ ಎಲ್ಲವೂ ಪೂರ್ಣರೂಪದಲ್ಲಿ ಮೂಡಿಬಂದಿತು. ಅಲ್ಲಿ ಬರುವ ಪಾತ್ರಗಳ ಉಡಿಗೆ -ತೊಡುಗೆ ,ನಡೆ -ನುಡಿ, ಎಲ್ಲವೂ ದಿವ್ಯದೃಷ್ಟಿಗೆ ಹೊಳೆಯಿತು. ಅಲ್ಲಿಯ ಘಟನಾವಳಿಗಳೆಲ್ಲವೂ ಯಥಾ ರೀತಿಯಲ್ಲಿ ತಿಳಿದುಬಂದವು. ಅಲ್ಲದೇ ಇಡೀ ದೇಶದಲ್ಲಿ 'ರಾಮರಾಜ್ಯ' ಎಂಬ ಖ್ಯಾತಿಗೆ ಪಾತ್ರವಾದ ಆಡಳಿತವನ್ನು ಸ್ಥಾಪಿಸಿ ಅಯೋಧ್ಯೆಯನ್ನು ಆಳುತ್ತಿದ್ದ ಶ್ರೀರಾಮನ ಚರಿತ್ರೆಯನ್ನೂ ಕಲೆ ಹಾಕಿದರು. ಹೀಗೆ 24 ಸಾವಿರ ಶ್ಲೋಕಗಳಿಂದ ಕೂಡಿದ, ಮುಂದೆ ಹೀಗಿದ್ದರೆ ಮಹಾಕಾವ್ಯ ಎಂಬ ಲಕ್ಷಣ ನಿರ್ಧಾರಕ್ಕೆ ಮೂಲವಾಗಿ 'ರಾಮಾಯಣ' ಎಂಬ ಆದಿಕಾವ್ಯ ರಚಿತವಾಯಿತು. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ, ಎಂದು ಆದಿಕವಿ ವಾಲ್ಮೀಕಿಯಿಂದ ರಚಿತವಾಗಿಯೂ, ಉತ್ತರಕಾಂಡ ಎಂಬ ಏಳನೆ ಕಾಂಡ ಅವರ ಮುಂದಿನವರಿಂದ ರಚಿತವಾಗಿಯೂ ಇಡೀ ಪ್ರಪಂಚದಲ್ಲಿ ಪ್ರಸಿದ್ಧವಾಯಿತು.

ಇದು ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ ಭಯಾನಕ, ಭೀಭತ್ಸ, ರೌದ್ರ,ಶಾಂತ ಎಂಬ ನವರಸಗಳಿಂದಲೂ, ರಮ್ಯವೂ, ಮಾನವೀಯತೆಯನ್ನು ಮಿಡಿಯುವ ಮತ್ತು ನೈತಿಕಮೌಲ್ಯಗಳನ್ನು ಪ್ರತಿಷ್ಠಾಪಿಸುವ ಮನೋಜ್ಞವೂ ಆದ ಕಥೆಗಳಿಂದ ಕೂಡಿದೆ. ಈ ಕಾವ್ಯವನ್ನು ಷಜ್ಜ ,ಋಷಭ, ಗಾಂಧಾರ, ಮದ್ಯಮ,ಪಂಚಮ,ಧೈವತ,ನಿಷಾಧ ಎಂಬ ಸಪ್ತಸ್ವರಗಳಲ್ಲಿ ಹಾಡಬಹುದು. ಇಂತಹ ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿಮಹರ್ಷಿಗಳ ಶಿಷ್ಯರು ಅವರ ಬಾಯಿಂದಲೇ ಕೇಳಿ ತುಂಬಾ ಸಂತೋಷಪಟ್ಟರು.

Writer Details

ವನರಾಗ ಶರ್ಮಾ

© bangalorewaves. All rights reserved. Developed And Managed by Rishi Systems P. Limited