Untitled Document
Sign Up | Login    
ರಾಮಾಯಣ
ಮಹರ್ಷಿ ವಾಲ್ಮೀಕಿ
ದಾರಿಹೋಕರನ್ನು ದೋಚುವ ದರೋಡೆಗಾರನಾಗಿದ್ದ ಪ್ರಾಚೆತಸ

ದುಷ್ಟರ ಸಂಗದಿ ಬೇಡನು ಎನಿಸಿಹ
ಪ್ರಾಚೇತಸನು ಕಣ್ದರೆದು |
ಮುನಿವಾಲ್ಮೀಕಿಯಾದನು ಕವಿವರ
ಪಿಕದೊಲು -ಹುತ್ತದಿ ತಪಗೈದು ||

ಪರಮ ಪಾವನೆಯಾದ ಗಂಗಾನದಿಯ ರಮಣೀಯವಾದ ಪ್ರದೇಶ. ಜುಳು ಜುಳು ಹರಿಯುತ್ತಿರುವ ಗಂಗೆಯ ಉಪನದಿಯಾದ ’ತಮಸಾ ’ ಎಂಬ ಪುಣ್ಯ ನದಿಯ ತಟದಲ್ಲಿ ಸುಂದರವಾದ ಒಂದು ಆಶ್ರಮ. ಸ್ವರ್ಗಕ್ಕೆ ಸಮನಾದ ಆ ಆಶ್ರಮ ಪರಿಸರದಲ್ಲಿ ಜನ್ಮ ಶತ್ರುಗಳಾದ ಹಾವು-ಮುಂಗುಸಿ, ಆಕಳು-ಹುಲಿ, ಬೆಕ್ಕು-ಇಲಿ, ಆನೆ-ಸಿಂಹ, ಪಾರಿವಾಳ-ಗಿಡುಗ, ಜಿಂಕೆ-ಚಿರತೆ ಮೊದಲಾದ ಪ್ರಾಣಿ ಪಕ್ಷಿಗಳು ಪರಸ್ಪರ ಪ್ರೀತಿಸ್ನೇಹದಿಂದ ಒಡನಾಡಿಗಳಾಗಿ ಒಂದೇ ಕುಟುಂಬದವರೋ ಎಂಬಂತೆ ವಾಸಮಾಡಿಕೊಂಡಿದ್ದವು. ಅದೇ ಆದಿಕವಿ ವಾಲ್ಮೀಕಿ ಮಹರ್ಷಿಗಳ ಪುಣ್ಯಾಶ್ರಮ. ಅಲ್ಲಿ ಅನೇಕ ಜನ ಶಿಷ್ಯರು ವಿದ್ಯಾರ್ಜನೆ ಮಾಡುತ್ತಿದ್ದರು. ಅದು ತಪಸ್ವಿಗಳ ಪುಣ್ಯ ಧಾಮವೂ, ಶ್ರೇಷ್ಠವಾದ ವಿಶ್ವವಿದ್ಯಾಲಯ ಸದೃಶವಾದ ಗುರುಕುಲವೂ ಆಗಿದ್ದಿತು. ಶ್ರೀಮದ್ರಾಮಾಯಣ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು ಕುಲಪತಿಗಳಾಗಿದ್ದರು.

ವಾಲ್ಮೀಕಿ ಮಹರ್ಷಿಯ ಮೊದಲ ಹೆಸರು ಪ್ರಾಚೆತಸ . ಆತ ಪ್ರಚೇತ ಎಂಬ ಋಷಿಯ ಮಗನಾಗಿದ್ದ. ಸಪ್ತರ್ಷಿ ಎಂಬ ಅರ್ಥವನ್ನು ಹೊಂದಿದ ರೂಕ್ಷ ಎಂಬ ಹೆಸರೂ ಆತನಿಗಿತ್ತು. ಬಾಲ್ಯದಲ್ಲಿ ಆತ ದುಷ್ಟರ ಸಂಗಕ್ಕೆ ಬಿದ್ದು ಕಾಡಿನಲ್ಲಿ ದಾರಿಹೋಕರನ್ನು ದೋಚುವ ದರೋಡೆಗಾರನಾಗಿದ್ದ. ಮದುವೆಯಾದಮೇಲೂ ಅದನ್ನೇ ಮುಂದುವರಿಸಿದ. ದಾರಿಗರ ಗಂಟು ಗದಡಿಗಳನ್ನು , ವಸ್ತು, ಒಡವೆ ಬಂಗಾರ, ಹಣ ಎಲ್ಲವನ್ನೂ ದೋಚಿ ಮನೆಗೊಯ್ದು ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ.

ಸಪ್ತರ್ಷಿಗಳನ್ನು ತದಕಿದ ಪ್ರಾಚೆತಸ

ಹೀಗಿರುವಾಗ ಒಮ್ಮೆ ನಾರದರು ಮೊದಲ್ಗೊಂಡು ಸಪ್ತರ್ಷಿಗಳು ಆ ದಾರಿಯಲ್ಲಿ ಬಂದಾಗ ರೂಕ್ಷ ಅವರನ್ನು ತದಕಿದ. ಆಗ ಅವರು "ಅಯ್ಯಾ ಬೇಡನೆ, ನಾವು ಋಷಿಗಳು. ದಂಡ ಕಮಂಡಲು ಹೊರತು ನಮ್ಮ ಬಳಿ ಏನೂ ಇಲ್ಲ. ಅದನ್ನು ಬೇಕಾದರೆ ನೀನೇ ಇಟ್ಟುಕೊಳ್ಳಬಹುದು. ಆದರೆ ನೀನು ಮಾಡುತ್ತಿರುವ ಕಾರ್ಯಮಾತ್ರ ಮಹಾ ಪಾಪದ ಕಾರ್ಯ. ನಿನ್ನಿಂದಾಗಿ ಅನೇಕ ಜನ ಮಕ್ಕಳು ತಾಯಂದಿರು ಬೀದಿಪಾಲಾಗಿದ್ದಾರೆ. ಅವರನ್ನೆಲ್ಲ ದುಃಖಕ್ಕೆ ಈಡುಮಾಡಿದ ನಿನಗೆ ಒಳ್ಳೆಯದಾಗುತ್ತದೆಯೆ? ಘೋರ ನರಕವೇ ಗತಿ. ವಿನಾಕಾರಣ ಯಾಕೆ ನೀನು ಇಂತಹ ನೀಚ ಕೆಲಸವನ್ನು ಮಾಡುತ್ತಿದ್ದೀಯ?" ಎಂದು ಕೇಳಿದರು.

"ನಾನು ಹೆಂಡತಿ ಮಕ್ಕಳನ್ನು ಸಾಕಿ ಸಲಹಬೇಕು..ಅದಕ್ಕೆ.." ಎಂದ ಬೇಡ.

"ಹಾಗಾದರೆ ಅವರು ನೀನು ಮಾಡಿದ ಪಾಪದಲ್ಲಿ ಪಾಲು ತೆಗೆದುಕೊಳ್ಳುತ್ತಾರೆಯೆ?ಎಂದು ಕೇಳಿಕೊಂಡು ಬಾ , ನಾವು ಇಲ್ಲಿಯೇ ನಿಂತಿರುತ್ತೇವೆ" ಎಂದಾಗ ಋಷಿ ಮುನಿಗಳು ಸುಳ್ಳು ಹೇಳುವುದಿಲ್ಲ ಎಂದು ಗೊತ್ತಿದ್ದ ರೂಕ್ಷ " ಆಯಿತು, ನೀವು ಇಲ್ಲೇ ನಿಂತಿರಿ" ಎಂದು ಮನೆಗೆ ಬಂದು "ಕೊಲೆ ಸುಲಿಗೆ ಮಾಡಿ ನಾನು ಮಹಾಪಾಪಿಯಾಗಿದ್ದೇನಂತೆ. ನಿಮ್ಮ ಹೊಟ್ಟೆಹೊರೆಯುವ ಸಲುವಾಗಿ ನಾನು ಹೀಗೆ ಮಾಡುತ್ತಿದ್ದೇನೆ. ನನ್ನ ಪಾಪದಲ್ಲಿ ನೀವೂ ಅರ್ಧಪಾಲು ತೆಗೆದುಕೊಳ್ಳಲು ತಯಾರಿದ್ದೀರ?" ಎಂದು ಕೇಳಿದ. ಹೆಂಡತಿ ಮಕ್ಕಳು " ನಮ್ಮನ್ನು ರಕ್ಷಣೆ ಮಾಡುವುದು ನಿನ್ನ ಕರ್ತವ್ಯ. ನೀನು ಮಾಡಿದ ಪಾಪದಲ್ಲಿ ನಾವು ಹೇಗೆ ಪಾಲುದಾರರಾಗುತ್ತೇವೆ? ಅವರವರು ಮಾಡಿದ ಪಾಪ ಅವರವರಿಗೆ.ಅಷ್ಟಕ್ಕೂ ನಾವು ಇಂತಹ ನೀಚಮಾರ್ಗದಿಂದ ನಮ್ಮನ್ನು ರಕ್ಷಣೆ ಮಾಡಬೇಕೆಂದು ಹೇಳಿದ್ದೇವೆಯೆ? ಒಳ್ಳೆಯ ಮಾರ್ಗದಿಂದ ನೀನು ನಮ್ಮನ್ನು ರಕ್ಷಣೆ ಮಾಡಬೇಕಾಗಿತ್ತು. ನೀತಿಯುತವಾಗಿ ನಡೆದುಕೊಳ್ಳಬೇಕಾಗಿತ್ತು. ಅದಕ್ಕೆ ನೀನೇ ಹೊಣೆ. ಆದ್ದರಿಂದ ನಾವು ನಿನ್ನ ಪಾಪದಲ್ಲಿ ಪಾಲುದಾರರಾಗಲಾರೆವು" ಎಂದರು. ಈ ಉತ್ತರ ಕೇಳಿ ತುಂಬಾ ಆಘಾತಗೊಂಡ ಬೇಡ ಹೆಂಡತಿ ಮಕ್ಕಳಿಗೆ "ನೀವು ನನ್ನ ಕಣ್ಣು ತೆರೆಸಿದಿರಿ.." ಎಂದು ವಿದಾಯ ಹೇಳಿ, ವ್ಯಾಕುಲಚಿತ್ತನಾಗಿ ಮರಳಿಬಂದು ನಡೆದ ಸಂಗತಿಯನ್ನು ಮುನಿಗಳಿಗೆ ಅರುಹಿದ. ಮತ್ತು ಈ ಘೋರ ಪಾಪದಿಂದ ಬಿಡುಗಡೆ ಹೇಗೆ? ಎಂದೂ ಕೇಳಿದ.ಸಪ್ತರ್ಷಿಗಳು ಶ್ರೀರಾಮ ಮಂತ್ರವನ್ನು ಆತನಿಗೆ ಉಪದೇಶಮಾಡಿ, ’ನಾವು ಹಿಂದಿರುಗುವವರೆಗೆ ಜಪಿಸುತ್ತಿರು, ನೀನು ಪುನೀತನಾಗುತ್ತೀಯ’ ಎಂದು ಹೇಳಿ ಮುಂದೆ ತೆರಳಿದರು.

ನಂತರ ಅನೇಕ ವರ್ಷಗಳ ವರೆಗೆ ಬೇಡರೂಕ್ಷ ಶ್ರದ್ಧಾಭಕ್ತಿಗಳಿಂದ, ದೇಹ ಅಲ್ಲಾಡದಂತೆ ನಿಶ್ಚಲನಾಗಿ, ರಾಮನಾಮವನ್ನು ಜಪಿಸುತ್ತ ಜಪಿಸುತ್ತ ಇಹಲೋಕವನ್ನೇ ಮರೆತ. ಅವನ ಸುತ್ತ ಎತ್ತರವಾದ ಹುತ್ತಬೆಳೆಯಿತು. ಅದರಿಂದ ರಾಮ ರಾಮ ಎಂಬ ಧ್ವನಿ ಹೊರಹೊಮ್ಮುತ್ತಿತ್ತು. ಕೆಲಕಾಲಾನಂತರ ಸಪ್ತರ್ಷಿಗಳು ಮರಳಿದಾಗ ಅದನ್ನು ಕಂಡು ರಾಮನಾಮ ತಲ್ಲೀನನಾದ ಆತನನ್ನು ಕೂಗಿಕರೆದರು. ಕರೆ ಕೇಳಿ ಎಚ್ಚತ್ತ ಆತ ವಲ್ಮೀಕವನ್ನು ಒಡೆದು ಹೊರಬಂದು ಭಕ್ತಿಕಂಬನಿ ಹರಿಸುತ್ತ ಮುನಿಗಳಿಗೆ ಎರಗಿದ. ನಿದ್ರಾಹಾರವಿಲ್ಲದೆ ಘೋರ ತಪಸ್ಸಿನಿಂದಾಗಿ ಕೃಶನಾದ ಆತನನ್ನು ಪ್ರೀತಿಯಿಂದ ತಬ್ಬಿಕೊಂಡ ಮುನಿಗಳು ’ವಲ್ಮೀಕ’ ಎಂದರೆ ಹುತ್ತ-ಅದನ್ನು ಒಡೆದು ಹೊರಬಂದುದಕ್ಕಾಗಿ "ವಾಲ್ಮೀಕಿ" ಎಂದು ಕರೆದು "ನೀನು ಮಹಾಮಹಿಮನಾದ ಮಹರ್ಷಿ ನಿನ್ನಿಂದ ಮುಂದೆ ಮಹತ್ಕ್ಕಾರ್ಯ ಜರುಗಲಿದೆ" ಎಂದು ಹೇಳಿ ಅಂತರಿಕ್ಷದಲ್ಲಿ ಮರೆಯಾದರು.

ಹೀಗೆ ಬೇಡನಾಗಿದ್ದ ಪ್ರಾಚೇತಸ ವಾಲ್ಮಿಕಿ ಮಹರ್ಷಿಗಳು ಎಂದು ಪ್ರಸಿದ್ಧರಾದರು. ವೇದ ಉಪನಿಷತ್ತು ಕಾವ್ಯ ಪುರಾಣಾದಿಗಳಲ್ಲಿ ಕುಶಲಿಯೂ, ಮಹಾತಪಸ್ವಿಯೂ, ಜ್ಞಾನಿಯೂ ಆದ ಅವರು ತಮಸಾ ನದೀತೀರದಲ್ಲಿ ಆಶ್ರಮವನ್ನು ಸ್ಥಾಪಿಸಿಕೊಂಡು ಲೋಕಕಲ್ಯಾಣವನ್ನು ಜರುಗಿಸುತ್ತ, ಗುರುಕುಲವನ್ನು ನಡೆಸಿಕೊಂಡು ಬರುತ್ತ "ಕುಲಪತಿಗಳು" ಎನಿಸಿಕೊಂಡಿದ್ದರು. ಅಂತಹ ಪ್ರಾತಃಸ್ಮರಣೀಯರಾದ ಮಹಾಮಹಿಮರಿಗೆ ಹೀಗೆ ನಮಸ್ಕಾರ ಹೇಳಲಾಗುತ್ತದೆ:

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಅಕ್ಷರ ಮಧುರದ ರಾಮಾ ರಾಮ
ಎಂಬಾ ನಾಮವ ಮಧುರದಲಿ ||
ಕವಿತೆಯ ಶಾಖೆಯನೇರುತ ಹಾಡುವ
ಕೋಗಿಲೆ ವಾಲ್ಮೀಕಿಗೆ ನಮನರಲಿ||

(ಮುಂದುವರಿಯುವುದು)

Writer Details

ವನರಾಗ ಶರ್ಮಾ

© bangalorewaves. All rights reserved. Developed And Managed by Rishi Systems P. Limited