Untitled Document
Sign Up | Login    
Dynamic website and Portals
  
August 22, 2016

ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ

ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ

ರಿಯೋ ಡಿ ಜನೈರೋ : ಸಾಂಬಾ ನಾಡಿನಲ್ಲಿ ಸತತ 16 ದಿನಗಳ ಕಾಲ ನಡೆದ ವಿಶ್ವದ ಅತಿ ದೊಡ್ಡ ಕ್ರೀಡಾ ಉತ್ಸವ ರಿಯೋ ಒಲಿಂಪಿಕ್ಸ್ ಗೆ ವಿದ್ಯುಕ್ತ ತೆರೆ ಬಿದ್ದಿದ್ದು, ಸಿಡಿ ಮದ್ದು ಪ್ರದರ್ಶನದ ಮೂಲಕ ಅದ್ದೂರಿಯಾಗಿ ತೆರೆ ಎಳೆಯಲಾಗಿದೆ.

ರಿಯೋ ಡಿ ಜನೈರೋದ ಕ್ರೀಡಾ ಗ್ರಾಮದ ಮರಕಾನಾ ಸ್ಟೇಡಿಯಂನಲ್ಲಿ ಲೇಸರ್ ಪ್ರದರ್ಶನ ಹಾಗೂ ಬೆಳಕಿನ ಚಿತ್ತಾರ ಸಿಡಿಸಿದ ಸಿಡಿಮದ್ದು ಪ್ರದರ್ಶನ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಭಿಮಾನಿಗಳ ನಿರ್ಗಮನ ಪಥಸಂಚಲನ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳು ಗಮನಸೆಳೆಯಿತು. 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಮತ್ತೆ ಸೇರೋಣ ಎಂಬ ಸಂದೇಶ ಸಾರಲಾಯಿತು. ವಿವಿಧ ದೇಶಗಳ ಸಾವಿರಾರು ಕ್ರೀಡಾ ಪಟುಗಳು, ಲಕ್ಷಾಂತರ ಅಭಿಮಾನಿಗಳು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಸಾಧನೆ ಮಾಡಿದ್ದ ಭಾರತ ರಿಯೋ ಗೇಮ್ಸ್‌ನಲ್ಲಿ ಪದಕ ದ್ವಿಗುಣಗೊಳಿಸಿಕೊಳ್ಳುವ ಇರಾದೆಯಲ್ಲಿತ್ತು. ಪದಕದ ಅಪಾರ ನಿರೀಕ್ಷೆ ಹೊಂದಿದ್ದ ಭಾರತಕ್ಕೆ ಕುಸ್ತಿ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಮಾತ್ರ ಪದಕಗಳು ಲಭಿಸಿವೆ. ಭಾರತದ ಇತಿಹಾಸದಲ್ಲಿಯೇ ಅತ್ಯಧಿಕ ಕ್ರೀಡಾಪಟುಗಳನ್ನು ಕ್ರೀಡಾಕೂಟಕ್ಕೆ ರವಾನಿಸಿದ್ದ ಭಾರತ ಕೇವಲ 2 ಪದಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಕ್ರೀಡಾಕೂಟದ ಅಂತಿಮ ದಿನವೂ ಕೂಡ ಭಾರತ ಪದಕದಾಸೆ ಹೊಂದಿತ್ತಾದರೂ, 65 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಕ್ರೀಡಾಕೂಟದಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕದೊಂದಿಗೆ ಕೇವಲ 2 ಪದಕಗಳನ್ನು ಪಡೆದು ಪದಕ ಪಟ್ಟಿಯಲ್ಲಿ 67ನೇ ಸ್ಥಾನ ಪಡೆದಿದೆ.

ಇನ್ನು ಇಡೀ ಕ್ರೀಡಾಕೂಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅಮೆರಿಕ 45 ಚಿನ್ನದ ಪದಕ ಸೇರಿದಂತೆ ಒಟ್ಟು 120 ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಬ್ರಿಟನ್ 27 ಚಿನ್ನ ಹಾಗೂ ಒಟ್ಟಾರೆ 67 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಕ್ರೀಡಾಕೂಟದಲ್ಲಿ ಚೀನಾ ಈ ಬಾರಿ 26 ಚಿನ್ನದ ಪದಕದೊಂದಿಗೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಚೀನಾವನ್ನು ಹಿಂದಿಕ್ಕಿದ ಬ್ರಿಟನ್ ಐತಿಹಾಸಿಕ 2ನೇ ಸ್ಥಾನ ಪಡೆದಿದೆ.

 

 

Share this page : 
 

Table 'bangalorewaves.bv_news_comments' doesn't exist