ಬೆಂಗಳೂರು : ರಾಜ್ಯಾದ್ಯಂತ ಸುರಿದ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆ ಅವಾಂತರಕ್ಕೆ ವಿವಿಧ ಪ್ರಕರಣಗಳಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಹಲವಾರು ಬಡಾವಣೆಗಳು ದ್ವೀಪಗಳಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಶಾಂತಿನಗರ ಸೇರಿದಂತೆ ಹಲವಾರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದು ಹತ್ತಾರು ವಾಹನಗಳು ಜಖಂಗೊಂಡಿವೆ. ಕೃಷ್ಣರಾಜಪುರದ ವಿಧಾನಸಭಾ ಕ್ಷೇತ್ರದ ಭಟ್ಟರಹಳ್ಳಿಯ ಆರ್‌ಎಂಎಸ್ ಕಾಲೋನಿಯ ಮನೆಗೆ ರಾತ್ರಿ ಮಳೆ ನೀರು ನುಗ್ಗಿದ್ದು, ಯುಪಿಎಸ್ ಸಂಪರ್ಕ ಕಡಿತಗೊಳಿಸಲು ತೆರಳಿದ ಜೋಸ್ ಮೀನಮ್ಮ (60) ಎಂಬುವರು ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿಯ ಆಲೂರುಪಾಳ್ಯದಲ್ಲಿ ಗೋಡೆ ಕುಸಿದು ನಾರಾಯಣಪ್ಪ (48) ಎಂಬುವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಹುಬ್ಬಳ್ಳಿ, ನವಲಗುಂದ ಸೇರಿದಂತೆ ಧಾರವಾಡ ಜಿಲ್ಲೆಯ ಹಲವೆಡೆಯೂ ಮಳೆಯಾಗಿದ್ದು, ನವಲಗುಂದ ತಾಲೂಕಿನ ದಾಟನಾಳ ಗ್ರಾಮದ ರಂಗಪ್ಪ ಹನಮಪ್ಪ ಬಿರಸೀನ (36) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಇದೇ ವೇಳೆ ರಾಯಚೂರು ತಾಲೂಕಿನ ಪುಚ್ಚಲದಿನ್ನಿ ಹೊರವಲಯದಲ್ಲಿ ಸಿಡಿಲು ಬಡಿದು ಚಂದ್ರಮ್ಮ (30) ಎಂಬುವರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಆಲೂರಿನಲ್ಲಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ನಾರಾಯಣ್ಣಪ್ಪ (48) ಎಂಬುವರು ಮೃತಪಟ್ಟಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮೈಸೂರು ನಗರದಲ್ಲಿ ಭಾರಿ ಮಳೆ ಆಗಿದ್ದರಿಂದ ದಸರಾ ಸಂಭ್ರಮಕ್ಕೆ ತೀವ್ರ ಅಡಚಣೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಸತತ 11 ಗಂಟೆ ಸುರಿದ ಮಳೆಗೆ 30ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿದ್ದು, 20 ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನೀರಿನಲ್ಲಿ ಕೊಚ್ಚಿ ಕಬಿನಿ ನದಿ ಸೇರಿದೆ. ಪಿರಿಯಾಪಟ್ಟಣದಲ್ಲಿ 193 ಮಿ.ಮೀ ಮಳೆಯಾಗಿದ್ದು, ಐದು ವರ್ಷ ಗಳಲ್ಲಿ ಒಂದೇ ದಿನ ಇಷ್ಟೊಂದು ಮಳೆಯಾಗಿದೆ. ಮೈಸೂರು ನಗರದಲ್ಲಿ ವರ್ಷದಲ್ಲಿಯೇ ಒಂದೇ ದಿನ ಅಧಿಕ 130 ಮಿ.ಮೀ ಮಳೆಯಾಗಿದೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ, ಉತ್ತರ ಒಳನಾಡಿನ ಹಲವೆಡೆ ಇನ್ನೆರಡು ದಿನ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.