ದೆಹಲಿ : ಮಂಗಳವಾರ ಮಧ್ಯರಾತ್ರಿಯಿಂದ 500-1000 ರುಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುತ್ತಿದ್ದು, ನಾಳೆಯಿಂದ 500-1000 ನೋಟುಗಳ ಚಲಾವಣೆ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ನಕಲಿ ಕರೆನ್ಸಿ, ಬ್ಲಾಕ್ ಮನಿ ಮತ್ತು ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ದೇಶದ ಜನತೆಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಸದ್ಯ 500-1000 ನೋಟುಗಳ ಬದಲಾವಣೆಗೆ 50 ದಿನಗಳ ಕಾಲಾವಕಾಶ ನೀಡಲಾಗಿದ್ದು ಅಷ್ಟರಲ್ಲಿ ನೋಟುಗಳ ಬದಲಾಯಿಸಿಕೊಳ್ಳಬಹುದಾಗಿದೆ. ನಾಳೆ ದೇಶಾದ್ಯಂತ ಯಾವುದೇ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ನವೆಂಬರ್ 9 ಮತ್ತು 10ರ ಮಧ್ಯರಾತ್ರಿವರೆಗೆ ಎಟಿಎಂಗಳು ತೆರೆದಿರುವುದಿಲ್ಲ.
ನವೆಂಬರ್ 11 ರವರೆಗೆ ಪ್ರಮುಖ ಸೇವಾಕೇಂದ್ರಗಳಾದ ಆಸ್ಪತ್ರೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಮುಂತಾದ ಕಡೆಗಳಲ್ಲಿ 500-1000 ನೋಟುಗಳನ್ನು ಉಪಯೋಗಿಸಬಹುದು.
ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಕಾರ್ಡ್ ಕೊಟ್ಟು ನೋಟನ್ನು ಬದಲಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಡಿಸೆಂಬರ್ 31ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ ವರೆಗೂ ರಿಸರ್ವ್ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ.
ಇನ್ನು ನೂತನವಾಗಿ 2000 ಹಾಗೂ 500 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಹೊಸ 500 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ.