ಲಖನೌ : ಮಹಿಳೆಯೊಬ್ಬಳ ಮಾನ ರಕ್ಷಣೆಗಾಗಿ ರಾಮಾಯಣ ಕಾಲದಲ್ಲಿ ಜಟಾಯು ಮಾಡಿದ ಹೋರಾಟ ಭಯೋತ್ಪಾದನೆ ವಿರುದ್ಧದ ಮೊದಲ ಹೋರಾಟ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
ಉತ್ತರ ಪ್ರದೇಶದ ಲಖ್‌ನೌನಲ್ಲಿನ ಐಶ್ಬಾಗ್ ರಾಮಲೀಲಾ ಮೈದಾನದಲ್ಲಿ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ‘ನಾವೆಲ್ಲರೂ ರಾಮನಾಗಲು ಸಾಧ್ಯವಾಗದೇ ಹೋದರೂ, ಜಟಾಯುವಾಗಲು ಪ್ರಯತ್ನಿಸೋಣ, ಭಯೋತ್ಪಾದನೆಯನ್ನು ತೊಲಗಿಸೋಣ’ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.
ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರದಲ್ಲಿ ಭಾಷಣ ಮಾಡಿ ಎಲ್ಲರಿಗೂ ವಿಜಯ ದಶಮಿ ಶುಭಾಶಯ ಕೋರಿದರು. ರಾಮ, ಕೃಷ್ಣ ಜನಿಸಿದ ಭೂಮಿಯಲ್ಲಿ ವಿಜಯದಶಮಿಯ ಪವಿತ್ರ ದಿನದಂದು ಇಲ್ಲಿ ಮಾತನಾಡುವ ಅವಕಾಶ ಸಿಕ್ಕಿರುವುದು ತನ್ನ ಪಾಲಿನ ಭಾಗ್ಯ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶದ ಲಖ್‌ನೌದಲ್ಲಿನ ರಾಮಲೀಲಾ ಮೈದಾನದಲ್ಲಿ ಪುರಾತನ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಯಾಗಿರವುದಕ್ಕೆ ತನಗೆ ಅತೀವ ಸಂತಸವೆನಿಸಿದೆ ಎಂದರು ಮೋದಿ.
ನಮ್ಮೊಳಗಿನ ದುಷ್ಟ ಸ್ವಭಾವವನ್ನು ನಾವು ನಾಶ ಮಾಡಬೇಕು; ರಾವಣನ ದಹನದಿಂದ ನಾವು ಅರಿತುಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ; ದುಷ್ಟರ ವಿರುದ್ಧದ ಹೋರಾಟಕ್ಕೆ ರಾಮಾಯಣವೇ ಸಾಕ್ಷಿಯಾಗಿದೆ; ಜಟಾಯು ಯುದ್ಧ ಮಾಡಿದ್ದು ಹೆಣ್ಣಿನ ರಕ್ಷಣೆಗಾಗಿ ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ತಮ್ಮ ಈ ಸ್ಫೂರ್ತಿದಾಯಕ ಭಾಷಣವನ್ನು ಮುಗಿಸುವಾಗ ಮೂರು ಬಾರಿ ಕೂಗಿದ "ಜೈ ಶ್ರೀರಾಮ್' ಘೋಷಣೆಗೆ ನೆರದ ಬೃಹತ್ ಜನ ಸಮೂಹ ಜೈಶ್ರೀರಾಮ್ ಎಂದು ಕೂಗುವ ಮೂಲಕ ಘೋಷಣೆಯನ್ನು ಅನುರಣಿಸಿದರು.