ಬೆಂಗಳೂರು : ಕಾವೇರಿ ವಿವಾದ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದಲ್ಲಿಯೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸಿಟಿ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಒಂದು ವೇಳೆ ರಾಜ್ಯಕ್ಕೆ ವಿರುದ್ಧವಾಗಿ ಬಂದಲ್ಲಿ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಪೊಲೀಸರನ್ನು, 3 ಸಾವಿರ ಸಿ ಆರ್ ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮೈಸೂರು ರಸ್ತೆ, ಹೆಗ್ಗನಹಳ್ಳಿಗಳಲ್ಲಿ ಪೊಲೀಸ್ ಇಲಾಖೆ ವಿಶೇಷ ಭದ್ರತೆ ಒದಗಿಸಿದ್ದು ಈ ಭಾಗಗಳಲ್ಲಿ ಸೆ.25 ವರೆಗೆ ನಿಷೇದಾಜ್ಞೆ ಜಾರಿಯಲ್ಲಿದೆ.
ಬೆಂಗಳೂರಿನಲ್ಲಿ ಕೆಆರ್ ಪಿಎಫ್ ನ 40 ತುಕಡಿಗಳು, ಸಿಟಿ ಸಶಸ್ತ್ರ ಮೀಸಲು ಪಡೆಯ 30 ತುಕಡಿಗಳು, ರಾಪಿಡ್ ಆಕ್ಷನ್ ಫೋರ್ಸ್ ನ 6 ತಂಡ, ಮೂರೂ ಸೀಮಾ ಸುರಕ್ಷಾ ದಳ, 3 ಗಡಿ ಭದ್ರತಾ ಪಡೆ ತುಕಡಿಗಳು ಹಾಗು ಇಂಡೋ ಟಿಬೆಟಿಯನ್ ಗಡಿ ಪೊಲೀಸರನ್ನು ನಿಯೋಜಿಸಲಾಗಿದೆ.