ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀ ಕೋರ್ಟ್ ಆದೇಶ ಖಂಡಿಸಿ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.ರಾಜಧಾನಿ ಬೆಂಗಳೂರಿನಾದ್ಯಂತ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ತಮಿಳರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ತಿಳಿಸಿದ್ದಾರೆ.
ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು,ಮೈಸೂರು,ಮಂಡ್ಯ ಸೇರಿದಂತೆ ಎಲ್ಲ ಕಡೆ ಪ್ರತಿಭಟನೆಯ ಕಾವು ಜೋರಾಗಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಉದ್ರಿಕ್ತರ ಗುಂಪು ಚದುರಿಸುವುದಕ್ಕೆ ಪೊಲೀಸರು ಪೊಲೀಸರು ಲಾಟಿ ಚಾರ್ಜ್ ನಡೆಸಿದ್ದಾರೆ.
ತಮಿಳುನಾಡಿನ ನೋಂದಣಿಯಿದ್ದ ಲಾರಿಗೆ ಮೈಸೂರು ರಸ್ತೆಯಲ್ಲಿ ಬೆಂಕಿ ಹೊತ್ತಿಸಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ನಮ್ಮ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರನ್ನು ಹೊರಗೆ ಕಳುಹಿಸಿ, ಬೀಗ ಹಾಕಲಾಗಿದೆ. ಜತೆಗೆ ಪೊಲೀಸ್ ಕಾವಲನ್ನು ಬಿಗಿಗೊಳಿಸಲಾಗಿದೆ.
ಕನ್ನಡಪರ ಸಂಘಟನೆ ಕಾರ್ಯಕರ್ತರಿಂದ ಅಲ್ಲಲ್ಲಿ ಕಲ್ಲುತೂರಾಟ ನಡೆದಿದೆ. ಬೆಂಗಳೂರು ನಗರದಾದ್ಯಂತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.