ಬೆಂಗಳೂರು : ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶಾಸಕ ಮತ್ತು ಸಂಸದರ ಸಭೆ ಕರೆದಿದ್ದಾರೆ.
ತಮಿಳುನಾಡಿಗೆ 15,000 ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಖಂಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕಾವೇರಿ ಹಿತ ರಕ್ಷಣಾ ಸಮಿತಿ ಮಂಡ್ಯದಲ್ಲಿ ಬಂದ್‍ಗೆ ಕರೆ ನೀಡಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ.
ಚಾಮರಾಜನಗರ, ಮೈಸೂರು ಮತ್ತು ಹುಬ್ಬಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಮಿಳುನಾಡಿಗೆ ನೀರು ಬಿಡಬಾರದೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೆಲವೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನಾಕಾರರು ಕೆಆರ್‍ಎಸ್ ಜಲಾಶಯದ ಬಳಿ ಪ್ರತಿಭಟನೆ ನಡೆಸಲು ಮುನ್ನುಗ್ಗಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ.
ಮಂಡ್ಯದಲ್ಲಿ ಪ್ರತಿಭಟನೆ ಕಾವೇರಿದ ಹಿನ್ನಲೆಯಲ್ಲಿ ಮೈಸೂರಿನಿಂದ ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ನಡುವೆ ತಮಿಳುನಾಡಿನ ತಂಜಾವೂರಿನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.