Untitled Document
Sign Up | Login    
Dynamic website and Portals
  
August 20, 2016

ಮಧ್ಯ ಪ್ರದೇಶದಲ್ಲಿ ಭಾರೀ ಮಳೆಗೆ ಕುಸಿದ ಮನೆ; 7 ಮಂದಿ ಸಾವು: ಸಿಎಂ ರಿಂದ ತುರ್ತು ಸಭೆ

ಮಧ್ಯ ಪ್ರದೇಶದಲ್ಲಿ ಭಾರೀ ಮಳೆಗೆ ಕುಸಿದ ಮನೆ; 7 ಮಂದಿ ಸಾವು: ಸಿಎಂ ರಿಂದ ತುರ್ತು ಸಭೆ

ಭೋಪಾಲ್ : ಕಳೆದ ಕೆಲದಿನಗಳಿಂದ ಮಧ್ಯಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ರಾಜ್ಯದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತುರ್ತುಸಭೆ ಕರೆದಿದ್ದಾರೆ.

ಸಾಗರ್ ಜಿಲ್ಲೆಯ ಬನ್ನೆಘಾಟ್ ಪ್ರದೇಶದಲ್ಲಿ ಬೆಳಗ್ಗೆ ಭೋರ್ಗರೆಯುವ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಮೂರಂತಸ್ತಿನ ಮನೆ ಕುಸಿದುಬಿದ್ದಿದೆ. ದುರಂತದಲ್ಲಿ 7 ಜನಸಾವನ್ನಪ್ಪಿದ್ದು, ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ರೇವಾ, ಪನ್ನಾ, ಖಟ್ನಿ, ಛತ್ತರ್ಪುರ್ ಮತ್ತು ಸಾತ್ನ ಜಿಲ್ಲೆಗಳಲ್ಲಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಡ್ಯಾಂಗಳ ಬಹುತೇಕ ಬಾಗಿಲುಗಳನ್ನು ತೆರೆಯಲಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಿಂದ ಸುಮಾರು 80 ಗ್ರಾಮಗಳು ಮುಳುಗಡೆಯಾಗಿವೆ. 25,000 ಮಂದಿ ಸಂತ್ರಸ್ತರಾಗಿದ್ದಾರೆ.

ಭೀಕರ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ವಿಂದ್ಯಾ. ಬುಂದೇಲ್ ಖಂಡ್, ಜಬಲ್ ಪುರ, ವಿದಿಶಾ, ರಾಯ್ ಸೇನ್ ಜಿಲ್ಲೆಗಳಲ್ಲಿ ಸಾಕಷ್ಟು ಮನೆಗಳು ನಾಶವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಭಾರೀ ಮಳೆ ಮತ್ತು ನೆರೆ ಹಾವಳಿ ಕಡಿಮೆಯಾಗುವ ವರೆಗೆ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು 24 ಗಂಟೆಗಳ ಕಾಲ ಮಧ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚೌಹಾಣ್, ರಾಜ್ಯ ಪರಿಸ್ಥಿತಿ ಅವಲೋಕನಕ್ಕಾಗಿ ತುರ್ತು ಸಭೆಯನ್ನು ಕರೆದಿದ್ದಾರೆ.

ಈಗಾಗಲೆ ಪ್ರವಾಹಕ್ಕೆ ಸಿಲುಕಿ ಸಂಕಷ್ಟಗಳಿಗೆ ಈಡಾಗಿರುವವರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೆರವಾಗಲು ಭಾರತೀಯ ಸೇನೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

 

 

Share this page : 
 

Table 'bangalorewaves.bv_news_comments' doesn't exist