ಇಸ್ಲಾಮಾಬಾದ್ : ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಇಸ್ಲಾಮಾಬಾದ್ ಗೆ ಭಾರತೀಯ ನಿಯೋಗವನ್ನು ಕಳುಹಿಸಿಕೊಡುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯ ಭಾರತವನ್ನು ಆಹ್ವಾನಿಸಿದೆ.
ಜಮ್ಮು-ಕಾಶ್ಮೀರ ವಿಚಾರವಾಗಿ ಚರ್ಚಿಸಲು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಸಜ್ ಅಹ್ಮದ್ ಚೌಧರಿ ಅವರು, ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದು, ಮಾತುಕತೆಗೆ ಬರುವಂತೆ ಕೋರಿದ್ದಾರೆ. ಪಾಕ್ ವಿದೇಶಾಂಗ ಸಚಿವಾಲಯ ಈ ಬಗ್ಗೆ ಭಾರತಕ್ಕೆ ಪತ್ರವನ್ನು ಹಸ್ತಾಂತರಿಸಿದೆ.
ವಿದೇಶಾಂಗ ಕಾರ್ಯದರ್ಶಿ ಭಾರತೀಯ ರಾಯಭಾರಿಗೆ ಆಹ್ವಾನ ಪತ್ರವನ್ನು ನೀಡಿದ್ದಾರೆ. ಕಾಶ್ಮೀರ ವಿವಾದದ ಕುರಿತು ಮಾತುಕತೆ ನಡೆಸಲು ಭಾರತೀಯ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಉಭಯ ದೇಶಗಳು ಕಾಶ್ಮೀರ ವಿವಾದದ ಕುರಿತು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅಂತಾರಾಷ್ಟ್ರೀಯ ಬಾಧ್ಯತೆಯಾಗಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಉಗ್ರ ಬುರ್ಹಾನ್ ವನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭಾರತ-ಪಾಕ್ ಸಂಬಂಧ ತೀವ್ರ ಹದಗೆಟ್ಟಿತ್ತು. ಅಲ್ಲದೇ ಇತ್ತೀಚೆಗೆ ಸಂಸತ್ ಭವನದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕ್ ಆಕ್ರಮಿತ ಕಾಶ್ಮೀರ, ಜಮ್ಮು-ಕಾಶ್ಮೀರದ ಅವಿಭಾಜ್ಯ ಅಂಗ. ರಾಷ್ಟ್ರದ ಭದ್ರತೆ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಎಂದು ಪಾಕ್ ಗೆ ಖಡಕ್ ಸಂದೇಶ ರವಾನಿಸಿದ್ದರು. ಈ ನಿಟ್ಟಿನಲ್ಲಿ ಈಗ ಪಾಕ್, ಭಾರತಕ್ಕೆ ಮಾತುಕತೆಗೆ ಆಹ್ವಾನಿಸಿರುವುದು ಮಹತ್ವ ಪಡೆದುಕೊಂಡಿದೆ.