ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾಶ್ಮೀರಿಗಳಿಗೆ ನೆರವು ನೀಡಲು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ ಪ್ರಸ್ತಾವನೆಗೆ ಭಾರತ ತಿರುಗೇಟು ನೀಡಿದೆ.
ಕಾಶ್ಮೀರಿಗಳಿಗೆ ನೆರವು ನೀಡಲು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೌಖಿಕ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟವಾಗಿ ತಿರಸ್ಕರಿಸಿದೆ.
ಪಾಕಿಸ್ತಾನ ಭಾರತಕ್ಕೆ ಈಗಾಗಲೆ ಭಯೋತ್ಪಾದಕರನ್ನು, ಶಸ್ತಾಸ್ತ್ರಗಳನ್ನು, ಮಾದಕ ವಸ್ತುಗಳನ್ನು ಮತ್ತು ನಕಲಿ ನೋಟುಗಳನ್ನು ವ್ಯಾಪಕವಾಗಿ ರಫ್ತು ಮಾಡಿದೆ. ಇದೇ ಸಾಕು, ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದು ಬೇಕಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಡಾಖಂಡಿತವಾಗಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್,ಆಗಸ್ಟ್ 12 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಪಾಕಿಸ್ತಾನವು ನಮ್ಮ ರಾಯಭಾರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಪಾಕಿಸ್ತಾನದ ಈ ಪ್ರಸ್ತಾವನೆ ಅಸಂಬದ್ಧವಾದದ್ದು ಎಂದು ತಿಳಿಸಿದ್ದು, ಪಾಕ್ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ.