ನವದೆಹಲಿ : ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಜಂಟಿಯಾಗಿ ಲೋಕಾರ್ಪಣೆ ಗೊಳಿಸಿದ್ದಾರೆ.
ವಾರ್ಷಿಕ 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕದಿಂದ ತಮಿಳುನಾಡಿನ ಜತೆ ಕರ್ನಾಟಕಕ್ಕೂ ವಿದ್ಯುತ್ ಲಭ್ಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಸಹ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಒಂದನೇ ಘಟಕವನ್ನು ಲೋಕಾರ್ಪಣೆ ಮಾಡುವ ಮೂಲಕ ನಾವು ಮತ್ತೊಂದು ಐತಿಹಾಸಿಕ ಕ್ರಮ ಕೈಗೊಂಡಂತಾಗಿದೆ. ಇದು 1,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವಷ್ಟೇ ಅಲ್ಲ, ದೇಶದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕ. ಇಂಥ ಐದು ಘಟಕಗಳನ್ನು ಕೂಡಂಕುಳಂನಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ’ ಎಂದರು.
ಈ ವೇಳೆ ಮಾತನಾಡಿದ ಸಿಎಂ ಜಯಲಲಿತಾ ಸುರಕ್ಷತೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಮನವೊಲಿಸುವ ಮೂಲಕ ಯಾವತ್ತೂ ಯೋಜನೆಗೆ ಬೆಂಬಲ ನೀಡಿರುವುದಾಗಿ ತಿಳಿಸಿದರು.
ರಷ್ಯಾ ರಾಜಧಾನಿ ಮಾಸ್ಕೊದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಟಿನ್, ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಘಟಕವನ್ನು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನಿರ್ವಿುಸಲಾಗಿದೆ. ಇದು ಅತ್ಯುತ್ತಮ ಸುರಕ್ಷತಾ ವಿಧಾನಗಳನ್ನೊಳಗೊಂಡಿದೆ ಎಂದರು.
ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಒಂದು ಮತ್ತು 2ನೇ ಘಟಕವನ್ನು 20,962 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಉತ್ಪಾದನೆಯಾಗುವ ವಿದ್ಯುತ್ ತಮಿಳು ನಾಡು, ಕರ್ನಾಟಕ, ಕೇರಳ ಹಾಗೂ ಪುದುಚೇರಿಗಳಿಗೆ ವಿತರಣೆಯಾಗಲಿದೆ. ಈ ಪೈಕಿ ಮೊದಲ ಘಟಕ 2013ರಲ್ಲಿ ಪ್ರಾಯೋಗಿಕ ಕಾರ್ಯಾರಂಭ ಮಾಡಿತ್ತು. ಇದೀಗ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗಿದೆ.