ಬೆಂಗಳೂರು : ರಾಜ್ಯಸರ್ಕಾರದ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಮಸೂದೆಗೆ ರಾಜ್ಯಪಾಲ ವಜುಭಾಯ್ ವಾಲ ಅಂಕಿತ ಹಾಕಲು ಹಿಂಜರಿದಿದ್ದಾರೆ ಎನ್ನಲಾಗಿದೆ.
ರಾಜ್ಯಸರ್ಕಾರವು ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 50 ಲಕ್ಷ ರೂ. ಮೊತ್ತದವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲು ನೀಡಲು ಅವಕಾಶ ಕಲ್ಪಿಸಲು ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರಿಗೆ ಕಳುಹಿಸಿತ್ತು.
ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ. ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲು ನೀಡುವ ಉದ್ದೇಶದ ವಿಧೇಯಕವನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಲು ರಾಜ್ಯಪಾಲ ವಜುಭಾಯಿ ವಾಲಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರವು ಈ ವಿಧೇಯಕ ಜಾರಿ ಬಗ್ಗೆ ತೀವ್ರ ಆಸಕ್ತಿ ಹೊಂದಿತ್ತು. ಆದರೆ, ಮೀಸಲಾತಿ ನೀಡುವ ವಿಶೇಷ ಸವಲತ್ತಿಗೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ ಎಂಬ ಕಾರಣ ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕಲು ಹಿಂದೇಟುಹಾಕಿದ್ದು, ತಮ್ಮ ಆಕ್ಷೇಪಣೆಗಳೊಂದಿಗೆ ಸದರಿ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ತೀರ್ಮಾನಿಸಿದ್ದಾರೆ.