ಇಟಾನಗರ : ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪೌಲ್ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಪೌಲ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇಟಾನಗರದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಅವರು ನೇಣು ಬಿಗಿದುಕೊಂಡಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿ ಪದದಿಂದ ಇಳಿದ ಬಳಿಕ ಅವರು ತಮ್ಮ ಅಧಿಕೃತ ಸರಕಾರಿ ಬಂಗ್ಲೆಯನ್ನು ಇನ್ನಷ್ಟೇ ಖಾಲಿ ಮಾಡಬೇಕಿತ್ತು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೌಲ್, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾಲ್ಕು ತಿಂಗಳ ಹಿಂದಷ್ಟೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ಇದು ಸಹಜ ಸಾವಲ್ಲ. ಪೌಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಹೇಳಲಾಗುತ್ತಿದೆ. ಕಾಂಗ್ರೆಸ್ ಬಂಡಾಯ ಶಾಸಕರು ಹಾಗೂ ಬಿಜೆಪಿ ಸದಸ್ಯರ ಬಲದಿಂದ ಮುಖ್ಯಮಂತ್ರಿಯಾಗಿದ್ದರು. ಆದರೆ ಬಂಡಾಯ ಶಾಸಕರು ತಮ್ಮ ಬೆಂಬಲ ಹಿಂಪಡೆದ ಪರಿಣಾಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು.
ಕಲಿಖೋ ಪೌಲ್ ಅವರಿಗೆ 47 ವರ್ಷ ವಯಸ್ಸಾಗಿತ್ತು. 2016ರ ಫೆಬ್ರವರಿ 19ರಂದು ಅವರು ಅರುಣಾಚಲ ಪ್ರದೇಶದ ಎಂಟನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಅರುಣಾಚರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಕುಟ್ ಮಿತಿ ಪ್ರತಿಕ್ರಿಯಿಸಿ, ‘ಕಳೆದ ಹತ್ತು ದಿನದ ಹಿಂದೆ ನಾನು ಪೌಲ್ ಅವರ ಜತೆಗೆಮಾತನಾಡಿದ್ದೆ. ಅವರು ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾದವರಂತೆ ತೋರುತ್ತಿದ್ದರು. ಪ್ರಕರಣದ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.