ರಿಯೋ ಡಿ ಜನೈರೋ : ಕ್ರೀಡಾಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದ ಜಾಗತಿಕ ಕ್ರೀಡಾ ಹಬ್ಬ ರಿಯೋ ಒಲಂಪಿಕ್ಸ್ ಗೆ ವರ್ಣರಂಜಿತ ಚಾಲನೆ ದೊರೆತಿದ್ದು, ಈ ಮೂಲಕ ಒಲಂಪಿಕ್ಸ್ ನ 31ನೇ ಆವೃತ್ತಿ ಶುಕ್ರವಾರ (ಭಾರತೀಯ ಕಾಲಮಾನ ಪ್ರಕಾರ ಶನಿವಾರ ಮುಂಜಾನೆ 4:20ಕ್ಕೆ) ಆರಂಭಕಂಡಿದೆ.
ಒಲಿಂಪಿಕ್ಸ್ ಜ್ಯೋತಿ ಬೆಳಗುವುದರ ಮೂಲಕ ಅದ್ದೂರಿ ಚಾಲನೆ ಸಿಕ್ಕಿತು. ಸಾಂಬಾ ನೃತ್ಯದ ಸೊಬಗು, ಕ್ಯಾರಿಓಕ ಗಾನಸುಧೆಯೊಂದಿಗೆ ಸಾವಿರಾರು ಕಲಾವಿದರು ಮರಕಾನ ಕ್ರೀಡಾಂಗಣದಲ್ಲಿ ಮಂತ್ರಮುಗ್ಧ ಕ್ಷಣಗಳನ್ನು ದಾಖಲಿಸಿದರು. ಬಾನಂಗಳದಲ್ಲಿ ಸಿಡಿದ ಪಟಾಕಿಗಳು ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸಿದವು. 11,239 ಕ್ರೀಡಾಪಟುಗಳು, ಲಕ್ಷಾಂತರ ಕ್ರೀಡಾಭಿಮಾನಿಗಳು ಈ ಸಡಗರಕ್ಕೆ ಸಾಕ್ಷಿಯಾದರು.
ಅಮೇಜಾನ್ ಮಳೆಕಾಡುಗಳು ಬ್ರೆಜಿಲ್ ಜನತೆಯ ಜೀವನ ಶೈಲಿಯ ಭಾಗವಾಗಿರುವ ಬಗ್ಗೆ ಅದ್ಭುತ ರೂಪಕವನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಸುಮಾರು 3 ಗಂಟೆಗಳ ಕಾಲ ಸಾಗಿದ ಸಮಾರಂಭದಲ್ಲಿ ಬ್ರೆಜಿಲ್ನ 12 ಸಾಂಬಾ ಶಾಲೆಗಳ ಮಕ್ಕಳು ಸುಮಾರು 5,500 ಬಗೆಯ ವೇಷಭೂಷಣಗಳೊಂದಿಗೆ ಹೊಸ ಮಾಯಲೋಕವನ್ನೇ ಸೃಷ್ಟಿಸಿದರು. ಶಾಂತಿ, ಪರಿಸರ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಸಂದೇಶಗಳನ್ನು ಸಾರಲಾಯಿತು. ಬ್ರೆಜಿಲ್ ಸಂಗೀತ ಪರಂಪರೆಯ ಪ್ರವರ್ತಕರಲ್ಲೊಬ್ಬರೆನಿಸಿದ ಕವಿ, ಗಾಯಕ, ಗಿಟಾರಿಸ್ಟ್ ಗಿಲ್ಬರ್ಟೆ ಪ್ಯಾಸೋಸ್ ಗಿಲ್ ಮೊರೈರಾ ಕೂಡ ಸಮಾರಂಭದ ಕಳೆ ಹೆಚ್ಚಿಸಿದರು.
ಕ್ರೀಡಾಪಟುಗಳ ಪಥ ಸಂಚಲನದ ಕೊನೆಯಲ್ಲಿ ಬ್ರೆಜಿಲ್ ತಂಡ ಕೊನೆಯದಾಗಿ ಕ್ರೀಡಾಂಗಣ ಪ್ರವೇಶಿಸಿದಾಗ 78 ಸಾವಿರ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿತು.