Untitled Document
Sign Up | Login    
Dynamic website and Portals
  
July 24, 2016

ಬಾಹುಬಲಕ್ಕಿಂತ ಭಾವಬಲ ದೊಡ್ಡದು: ರಾಘವೇಶ್ವರ ಶ್ರೀ

ಬಾಹುಬಲಕ್ಕಿಂತ ಭಾವಬಲ ದೊಡ್ಡದು: ರಾಘವೇಶ್ವರ ಶ್ರೀ ಬಾಹುಬಲಕ್ಕಿಂತ ಭಾವಬಲ ದೊಡ್ಡದು: ರಾಘವೇಶ್ವರ ಶ್ರೀ

ಬೆಂಗಳೂರು : ಮಹರ್ಷಿ ವಶಿಷ್ಠರಲ್ಲಿಗೇ ಸಾಕ್ಷಾತ್ ರಾಜನೇ ಬಂದು ಗೋವನ್ನು ಕೇಳಿದರೂ ಪ್ರಯತ್ನಪೂರ್ವಕವಾಗಿ ಗೋವನ್ನು ರಕ್ಷಿಸಿಕೊಂಡರು, ಆದರೆ ಇಂದು ಕಟುಕರು ಕೊಡುವ ಪುಡಿಗಾಸಿಗೆ ಗೋವನ್ನು ಕಸಾಯಿಕಾನೆಗೆ ತಳ್ಳುತ್ತಿರುವುದು ವಿಷಾಧನೀಯ. ಜಗತ್ತು ಗೋವನ್ನು ಆಶ್ರಯಿಸಿದ್ದು, ಗೋವಿಲ್ಲದ ಬದುಕು ದುರ್ಬರ, ಹಾಗಾಗಿ ಕಲ್ಪವೃಕ್ಷವಾದ ಕಾಮಧೇನುವಿನ ಮೇಲೆ ಕತ್ತಿಪ್ರಯೋಗಮಾಡಬಾರದು ಎಂದು ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.

ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ “ಗೋಕಥೆ”ಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ಕೌಶಿಕ ರಾಜ ಹಾಗೂ ವಶಿಷ್ಠಾಶ್ರಮದ ಕಾಮಧೇನುವಿನ ಕಥನ, ಪ್ರವಚನ, ಗಾಯನ, ರೂಪಕ, ಚಿತ್ರರಚನೆಗಳಿಂದ ಕೂಡಿದ ವಿಶಿಷ್ಟವಾದ ಗೋಕಥಾ ಕಾರ್ಯಕ್ರಮದಲ್ಲಿ ನಿರೂಪಿಸಿದರು.

ಗೋವಿನ ಕುರಿತಾದ ಗಾನದಮೂಲಕ ಗೋಕಥಾವನ್ನು ಆರಂಭಿಸಿದ ಶ್ರೀಗಳು, ರಾಜ ಕೌಶಿಕನು ವಶಿಷ್ಠಾಶ್ರಮವನ್ನು ಪ್ರವೇಶಿಸುವುದು, ವಶಿಷ್ಠಾಶ್ರಮದ ವರ್ಣನೆ, ರಾಜ ಹಾಗೂ ಋಷಿಯ ಉಭಯಕುಶಲೋಪರಿ, ಸೈನ್ಯಸಮೇತನಾದ ಕೌಶಿಕನಿಗೆ ಕಾಮಧೇನುವಿನ ಸಹಾಯದೊಂದಿಗೆ ಆತಿಥ್ಯ ನೀಡುವುದು ಇತ್ಯಾದಿ ಪ್ರಸಂಗಗಳನ್ನು ಮನೋಜ್ಞವಾಗಿ ವಿವರಿಸಿದರು.

ಆತಿಥ್ಯ ನೀಡಿದ ಮಹರ್ಷಿಗಳಿಂದ ಕಾಮಧೇನುವನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಉದ್ಯುಕ್ತನಾದ ಕೌಶಿಕರಾಜನನ್ನು ಉದಾಹರಿಸಿ ಮಾತನಾಡಿ, ಅನುಚಿತ ಆಸೆ ಒಳ್ಳೆಯದಲ್ಲ, ರಾಜನೇ ಧೇನುವನ್ನು ಅಪಹರಿಸಲು ಮುಂದಾಗುವುದು ಬೇಲಿಯೇ ಮೇಲೆದ್ದು ಹೊಲವನ್ನು ಮೇಯ್ದಂತಾಗುತ್ತದೆ. ಮಠ - ಮಂದಿರಗಳು, ಸಾಧಕರ ಸ್ವತ್ತಿಗೆ ರಾಜತ್ವ ಕೈ ಹಾಕಬಾರದು. ಹಾಗೆಯೇ ರಾಜತ್ವವೇ ಎದುರಾದರೂ ವಶಿಷ್ಠರು ಗೋವನ್ನು ರಕ್ಷಿಸಿದಂತೆ ನಾವು ಗೋವುಗಳನ್ನು ರಕ್ಷಿಸಬೇಕು ಎಂದರು.

ಕಾಮಧೇನುವಿಗಾಗಿ ಕೌಶಿಕ ಹಾಗೂ ಮಹರ್ಷಿ ವಶಿಷ್ಠರ ಕಾಳಗವನ್ನು ವಿವರಿಸಿ, ರಾಜನ ಎಲ್ಲಾ ಅಸ್ತ್ರ ಶಸ್ತ್ರಗಳನ್ನು ವಶಿಷ್ಠರು ತಮ್ಮ ಬ್ರಹ್ಮದಂಡದ ಮೂಲಕವೇ ಎದುರಿಸಿದರು, ಆಮೂಲಕ ಬಾಹುಬಲಕ್ಕಿಂತ ಭಾವಬಲ, ಸತ್ವಬಲವೇ ದೊಡ್ಡದು ಎಂದು ನಿರೂಪಿಸಿದರು.

ಕಥೆಯ ನಿರೂಪಣೆಯ ಜೊತೆಜೊತೆಗೆ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಹೆಗಡೆ ಮನಮೋಹಕವಾಗಿ ಚಿತ್ರಿಸಿದರು, ಚಂದ್ರಶೇಖರ ಕೆದಿಲಾಯ, ಶ್ರೀಪಾದ್ ಭಟ್, ಕುಮಾರಿ ದೀಪಿಕಾ ಹಾಗೂ ತಂಡದ ಗಾಯನ ಕಥೆಯ ಅಂದವನ್ನು ಹೆಚ್ಚಿಸಿತು, ನಂತರ ಕೋರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ‘ಧರ್ಮಧೇನು’ರೂಪಕ ಮೂಡಿಬಂದಿತು.

ಗೋಕಥೆಯ ನಂತರ, ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ಧ್ವನಿಮುದ್ರಿಕೆ ಹಾಗೂ ಲಲಿತಾ ಸಹಸ್ರನಾಮ ಹೊತ್ತಿಗೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ತುಂಬಿದ ಸಭೆ ಗೋಕಥೆಯನ್ನು ಕಣ್ಣುತುಂಬಿಕೊಂಡಿತು. ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

 

Share this page : 
 

Table 'bangalorewaves.bv_news_comments' doesn't exist