ಭೋಪಾಲ್ : ಮಧ್ಯಪ್ರದೇಶ ರಾಜ್ಯಾಧ್ಯಂತ ಕಳೆದ ಎರಡು ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ರಾಜ್ಯಾಧ್ಯಂತ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ತಗ್ಗು ಪ್ರದೇಶ ಮತ್ತು ಜಲಾವೃತ ಪ್ರದೇಶದ ಜನರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ತಿಳಿಸಿದ್ದಾರೆ.
ನೈಸರ್ಗಿಕ ವಿಕೋಪದಿಂದ ಜನರ ರಕ್ಷಣೆ ಕುರಿತಂತೆ ಮುಖ್ಯಮಂತ್ರಿ ಚೌಹಾಣ್ ಉನ್ನತಾಧಿಕಾರಿಗಳ ತುರ್ತು ಸಭೆ ಕರೆದು, ಸಮಗ್ರ ಮಾಹಿತಿ ಪಡೆದಿದ್ದಾರೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಹಾರ ಕಾರ್ಯಾಚರಣೆ ಬಗ್ಗೆ ತುರ್ತು ಗಮನ ಹರಿಸಬೇಕೆಂದು ಸೂಚನೆ ನೀಡಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಕೊಂಚ ಕಡಿಮೆಯಾಗಿದ್ದ ಮಳೆಯ ಅಬ್ಬರ ಸಂಜೆಯಾಗುತ್ತಿದ್ದಂತೆ ಮತ್ತೆ ಧಾರಾಕಾರವಾಗಿ ಸುರಿಯಲು ಆರಂಭವಾಗಿದ್ದು, ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಹಲವಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ.
ರಾಜ್ಯದ ಹಲವಾರು ನದಿಗಳು ಉಕ್ಕೇರಿ ಹರಿಯುತ್ತಿದ್ದು, ಇಂದೋರ್, ಉಜ್ಜೈನಿ ಪ್ರದೇಶಗಳಲ್ಲಿ ಮುಂದಿನ 24 ತಾಸುಗಳ ಅವಧಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.