ನವದೆಹಲಿ : ಸುಮಾರು 8 ಸಾವಿರ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಎಲ್ಲ ಉಗ್ರರು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿರುವ ಉಗ್ರರ ತರಬೇತಿ ಕ್ಯಾಂಪ್ ಗಳಲ್ಲಿ ತರಬೇತಿ ಪಡೆದು ತಮ್ಮ ತವರು ದೇಶ ಬಾಂಗ್ಲಾದೇಶಕ್ಕೆ ಈಗ್ಗೆ ಕೆಲ ತಿಂಗಳ ಹಿಂದೆ ವಾಪಸಾಗಿದ್ದು. ಭಾರತದ ಮೇಲಿನ ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಉಗ್ರರ ದಾಳಿ ಹಿನ್ನಲೆಯಲ್ಲಿ ಭಾರತ-ಬಾಂಗ್ಲಾ ಗಡಿ ಸೇರಿದಂತೆ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದ ಎಲ್ಲ ಜಿಲ್ಲೆಗಳ ಚೆಕ್ಪೋಸ್ಟ್ಗಳಲ್ಲಿ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಉಗ್ರರ ಒಳನುಸುಳುವಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಬಾಂಗ್ಲಾ ಗುಪ್ತಚರ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳು ನಿಕಟ ಸಂಪರ್ಕದಲ್ಲಿದ್ದು, ಉಗ್ರರ ಕುರಿತ ಮಾಹಿತಿ ಕಲೆಹಾಕುತ್ತಿದ್ದಾರೆ. ಜುಲೈ 6ರಂದು ದೇಶಾದ್ಯಂತ ಪವಿತ್ರ ರಂಜಾನ್ ಹಬ್ಬದ ಆಚರಣೆ ನಡೆಯಲಿದ್ದು, ಈ ವೇಳೆ ಉಗ್ರರು ವಿಧ್ವಂಸಕ ಕೃತ್ಯ ನಡೆಸುವ ಕುರಿತು ಗುಪ್ತಚರ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.