ಸಿಯೋಲ್ : ಸಿಯೋಲ್ನಲ್ಲಿ ನಡೆಯುತ್ತಿರುವ 48 ದೇಶಗಳ ಪರಮಾಣು ಸರಬರಾಜುದಾರರ ಸಮೂಹ (ಎನ್ಎಸ್ಜಿ) ಸೇರ್ಪಡೆಗೆ ಭಾರತ ಶತಾಯಗತಾಯ ಯತ್ನಿಸಿದ್ದರೂ ಚೀನಾ ವಿರೋಧ ಮುಂದುವರೆದಿದ್ದು, ಭಾರತಕ್ಕೆ ಸದಸ್ಯತ್ವ ನೀಡಿಕೆ ಕುರಿತ ಚರ್ಚೆ ಇಂದಿಗೆ ಮುಂದೂಡಲಾಗಿದೆ.
ದಕ್ಷಿಣ ಕೊರಿಯಾದ ಸೋಲ್ನಲ್ಲಿ ಎನ್ಎಸ್ಜಿ ಸಭೆಗೆ ಪೂರಕವಾಗಿ ಭಾರತದ ವಿಚಾರದಲ್ಲಿ ಗುರುವಾರ ರಾತ್ರಿ ವಿಶೇಷ ಸಭೆ ನಡೆದಿದ್ದು, ಚರ್ಚೆ ನಡೆದಿದೆ. ಈ ವೇಳೆ ಭಾರತದ ಸೇರ್ಪಡೆಯನ್ನು ಚೀನಾ ಸೇರಿದಂತೆ 5 ರಾಷ್ಟ್ರಗಳು ವಿರೋಧಿಸಿವೆ. ಆದಾಗ್ಯೂ ಚರ್ಚೆ ಮುಂದುವರಿದಿದ್ದು,ಇಂದಿಗೆ ಮುಂದೂಡಿಕೆಯಾಗಿದೆ.
ಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದ (ಎನ್ಪಿಟಿಗೆ) ಸಹಿ ಹಾಕದ ಹೊರತು ಭಾರತಕ್ಕೆ ಸದಸ್ಯತ್ವ ನೀಡಬಾರದೆಂದು ಚೀನಾ ಪಟ್ಟು ಹಿಡಿಯಿತು. ಇದಕ್ಕೆ ಆಸ್ಟ್ರಿಯಾ, ಐರ್ಲೆಂಡ್, ಬ್ರೆಜಿಲ್, ಟರ್ಕಿ ಹಾಗೂ ನ್ಯೂಜಿಲೆಂಡ್ ದನಿಗೂಡಿಸಿದವು.
ಈ ವಿಚಾರವಾಗಿ ರ್ಚಚಿಸಲು ವಿಶೇಷ ಅಧಿವೇಶನ ನಡೆಯಿತು. ಅಜೆಂಡಾದಲ್ಲಿ ಈ ವಿಷಯ ಇರಲಿಲ್ಲವಾದರೂ ಜಪಾನ್ ಸೇರಿ ಹಲವು ರಾಷ್ಟ್ರಗಳು ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ನೀಡುವ ಬಗ್ಗೆ ಪ್ರಸ್ತಾಪಿಸಿದವು.
ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತಾದರೂ ಈ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಮುಂದುವರಿಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಎನ್ಪಿಟಿ ವಿಚಾರವಾಗಿ 6 ರಾಷ್ಟ್ರಗಳ ಮನವೊಲಿಸಲು ಭಾರತಕ್ಕೆ ಇಂದಿನ ಸಭೆಯಲ್ಲೂ ಅವಕಾಶ ಇದೆ.
ಭಾರತದ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ಎಸ್.ಜೈಶಂಕರ್ ಸೇರಿ ಹಲವು ರಾಜತಾಂತ್ರಿಕ ಅಧಿಕಾರಿಗಳು ಸಿಯೋಲ್ನಲ್ಲಿದ್ದು, ಭಾರತವನ್ನು ಬೆಂಬಲಿಸುವಂತೆ ಎನ್ಎಸ್ಜಿ ಸದಸ್ಯ ರಾಷ್ಟ್ರಗಳ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಸಭೆಯಲ್ಲಿ 48 ಸದಸ್ಯ ರಾಷ್ಟ್ರಗಳು, 300ಕ್ಕೂ ಹೆಚ್ಚು ಪ್ರತಿನಿಧಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ.