ಸಿರಿಯಾ : ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಗ್ದಾದಿ ಹತ್ಯೆಯಾಗಿರುವುದಾಗಿ ತಿಳಿದುಬಂದಿದೆ.
ಐಸಿಸ್ ಪ್ರಾಬಲ್ಯ ಹೊಂದಿರುವ ಉತ್ತರ ಸಿರಿಯಾದ ರಖ್ಖಾ ಪ್ರದೇಶದಲ್ಲಿ ಅಮೆರಿಕದ ವೈಮಾನಿಕ ಪಡೆ ನಡೆಸಿದ ದಾಳಿಯಲ್ಲಿ ಬಗ್ದಾದಿ ಸಾವನ್ನಪ್ಪಿರುವುದಾಗಿ ಇರಾಕ್ ಟಿವಿ ಚಾನೆಲ್ ವರದಿ ಮಾಡಿದೆ. ಅಲ್ಲದೇ ಬಗ್ದಾದಿ ಸಾವನ್ನಪ್ಪಿರುವುದಾಗಿ ಐಸಿಸ್ ಸ್ವಾಮ್ಯದ ಅರಬಿಕ್ ಸುದ್ದಿ ಸಂಸ್ಥೆ ಅಲ್-ಅಮಾಖ್ನ್ನು ಉಲ್ಲೇಖಿಸಿ ಟರ್ಕಿ ಪತ್ರಿಕೆ ಎನ್ನಿಸ್ ಸಫಕ್ ವರದಿ ಮಾಡಿದೆ.
ಮೊಸುಲ್ ನಗರದಿಂದ 65 ಕಿಮೀ. ದೂರದ ಪ್ರದೇಶವೊಂದರಲ್ಲಿ ಭಾನುವಾರ ಅಮೆರಿಕ ಮಿತ್ರಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಬಗ್ದಾದಿ ಮತ್ತು ಇತರರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿದ್ದವು.