ಹೆರಾತ್ : ಭಾರತ-ಆಪ್ಘಾನಿಸ್ತಾನದ ಸ್ನೇಹದ ಪ್ರತೀಕವಾಗಿ ಆಫ್ಘಾನಿಸ್ತಾನದಲ್ಲಿ ಭಾರತ ನಿರ್ಮಾಣ ಮಾಡಿರುವ ಸಲ್ಮಾ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಉದ್ಘಾಟಿಸಿದ್ದಾರೆ.
ಪಂಚರಾಷ್ಟ್ರ ಪ್ರವಾಸ ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಫ್ಘಾನಿಸ್ಥಾನಕ್ಕೆ ಭೇಟಿ ನೀಡಿದ್ದು, ಸಲ್ಮಾ ಡ್ಯಾಮ್ ಎಂದೇ ಕರೆಯಲ್ಪಡುವ ಭಾರತ-ಆಫ್ಘಾನ್ ಮೈತ್ರಿಯ ಅಣೆಕಟ್ಟನ್ನು ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ, ಆಫ್ಘಾನಿಸ್ತಾನ ಅಭಿವೃದ್ಧಿಯಾಗಬೇಕೆಂಬುದು ಭಾರತೀಯರ ದೀರ್ಘಕಾಲಿಕ ಆಶಯವಾಗಿದೆ. ಪ್ರಜಾಪ್ರಭುತ್ವ ಅಫ್ಘಾನಿಸ್ತಾನದಲ್ಲಿ ಆಳವಾಗಿ ಬೇರೂರಬೇಕು ಹಾಗೂ ಇಲ್ಲಿನ ಆರ್ಥಿಕತೆ ಸದೃಢವಾಗುವುದನ್ನು ಭಾರತ ಎದುರು ನೋಡುತ್ತಿದೆ ಎಂದರು.
ಸಮರಗ್ರಸ್ತ ಅಫ್ಘಾನಿಸ್ಥಾನಕ್ಕೆ ಯಾವುದೇ ಅಡೆತಡೆ ಇದ್ದರೂ ಭಾರತ ಸಹಕಾರವನ್ನು ನೀಡುತ್ತದೆ. ಆಫ್ಘಾನಿಸ್ಥಾನದ ಪ್ರತಿಯೊಂದು ಭಾಗದ ಅಭಿವೃದ್ಧಿಯಾಗಬೇಕು ಎಂಬುದು ಭಾರತದ ಆಶಯ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಅಫ್ಘಾನ್ ಅಧ್ಯಕ್ಷ ಘನಿ, ಮಹತ್ವಾಕಾಂಕ್ಷೆಯ ಈ ಅಣೆಕಟ್ಟಿನ ನಿರ್ಮಾಣದ ಮೂಲಕ ಅಫ್ಘಾನಿಸ್ಥಾನದ 40 ವರ್ಷಗಳಷ್ಟು ಹಿಂದಿನ ಕನಸು ಈಗ ನನಸಾಗಿದೆ ಎಂದು ಹೇಳಿದರು.
1,700ಕೋಟಿ ರೂ ವೆಚ್ಚದಲ್ಲಿ ಸಲ್ಮಾ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಹೆರಾತ್ ನಲ್ಲಿ ಭೂಮಿಯನ್ನು ಫಲವತ್ತಾಗಿಸುವುದಕ್ಕೆ ಈ ಅಣೆಕಟ್ಟು ನೆರವಾಗಲಿದೆ. ಈ ಡ್ಯಾಂ ನಿರ್ಮಾಣಕ್ಕಾಗಿ ದುಡಿದಿರುವ ಆಫ್ಘಾನ್ ಮತ್ತು ಭಾರತೀಯ ಇಂಜಿನಿಯರ್ಗಳ ಸಂಖ್ಯೆ 1,500. ಈ ಅಣೆಕಟ್ಟಿನ ಮೂರು ಟರ್ ಬೈನ್ ಗಳಿಂದ ಉತ್ಪಾದನೆಗೊಳ್ಳುವ ವಿದ್ಯುತ್ 42 ಮೆಗಾ ವ್ಯಾಟ್.