ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ತನ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಲೇಸರ್ ಬೇಲಿಗಳನ್ನು ನಿರ್ಮಿಸಿದೆ. ವಿಶ್ವದ ಅತ್ಯಂತ ಅಪಾಯಕಾರಿ ಗಡಿಗಳಲ್ಲಿ ಒಂದಾಗಿರುವ ಈ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಇದರ ಮೊದಲ ಹಂತವಾಗಿ ಪಂಜಾಬ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಭಾರತ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೇಲಿಗಳನ್ನು ನಿರ್ಮಿಸಿದೆ.
ಉಗ್ರರು, ಕಳ್ಳಸಾಗಣೆ ದಾರರು ಮತ್ತು ಅಕ್ರಮ ವಾಸಿಗಳ ಒಳನುಸುಳುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಲೇಸರ್ ವಾಲ್ ಅಳವಡಿಸಿದ್ದು, ಭದ್ರತಾ ಪಡೆಗೆ ಸಹಕಾರಿಯಾಗಲಿದೆ. ಇನ್ಫ್ರಾರೆಡ್ ಮತ್ತು ಲೇಸರ್ ಕಿರಣಗಳು ಗಡಿಯಲ್ಲಿನ ಅಸಹಜ ಚಟುವಟಿಕೆ, ನುಸುಳುವಿಕೆ ಯನ್ನು ಪತ್ತೆಹಚ್ಚಲು ನೆರವಾಗುತ್ತವೆ.
ಈವರೆಗೆ ವಿವಿಧ ಸ್ಥಳಗಳಲ್ಲಿ ಒಟ್ಟು 12 ಈ ರೀತಿಯ ಪರದೆ ಅಳವಡಿಸಿದ್ದು, ಮುಂದೆ ಒಟ್ಟು 45 ಲೇಸರ್ ಬೇಲಿಗಳನ್ನು ಅಳವಡಿಸಲಾಗುತ್ತದೆ. ಇದನ್ನು ಬಿಎಸ್ಎಫ್ ನಿಯಂತ್ರಿಸಲಿದೆ. ಎರಡು ವರ್ಷದ ಹಿಂದೆಯೇ ಗಡಿ ಭದ್ರತಾ ಪಡೆ ಲೇಸರ್ ಬೇಲಿ ಅಳವಡಿಕೆಗೆ ಮುಂದಾಗಿತ್ತು. ಆದರೆ ಕೆಲವೊಂದು ಪ್ರಾದೇಶಿಕ ಸಮಸ್ಯೆಗಳಿಂದ ಇದು ಸಾಧ್ಯವಾಗಿರಲಿಲ್ಲ. ಪಂಜಾಬ್, ರಾಜಸ್ಥಾನ ಮತ್ತು ಜಮ್ಮು-ಕಾಶ್ಮೀರದಲ್ಲಿ ಪಾಕ್ ನೊಂದಿಗೆ ಹಂಚಿಕೊಂಡಿರುವ ಗಡಿಯಲ್ಲಿ ಈ ಲೇಸರ್ ಗೋಡೆ ಕಾರ್ಯನಿರ್ವಹಿಸಲಿದೆ.
ಕಳೆದ ಜನವರಿ 1 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ಪೈಶಾಚಿಕ ದಾಳಿ ಬಳಿಕ ಪಾಕಿಸ್ತಾನದ ಮಾತನ್ನು ನಂಬದ ಭಾರತ ಎಚ್ಚೆತ್ತಿದ್ದು, ತನ್ನ ಗಡಿ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುವುದಾಗಿ ಹೇಳಿತ್ತು. ಅಂತೆಯೇ ಕೇವಲ ನಾಲ್ಕೇ ತಿಂಗಳಲ್ಲಿ ಲೇಸರ್ ಬೇಲಿ ನಿರ್ಮಿಸಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ಈ ಲೇಸರ್ ಬೇಲಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.