ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಮೇ ತಿಂಗಳಿಗೆ ಎರಡು ವರ್ಷ ಪೂರೈಸಲಿರುವ ಹಿನ್ನಲೆಯಲ್ಲಿ ಝರಾ ಮುಸ್ಕುರಾದೋ ಎಂಬ ಅಭಿಯಾನ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಎರಡು ವರ್ಷಗಳ ತಮ್ಮ ಸರ್ಕಾರದ ಯಶಸ್ಸಿನ ಬಗ್ಗೆ ಹಂಚಿಕೊಳ್ಳುವ ಸಲುವಾಗಿ ಮೇ.26 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ 'ಝರಾ ಮುಸ್ಕುರಾದೋ' ಎಂಬ 8 ಗಂಟೆಗಳ ಟಾಕ್ ಶೋಗೆ ಚಾಲನೆ ನೀಡಲಿದೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿ ಇಂಡಿಯಾ ಗೇಟ್ ನಲ್ಲಿ ವೀಕ್ಷಕರ ಮುಂದೆ ಪ್ಯಾನೆಲ್ ಡಿಸ್ಕಶನ್ ನಡೆಯಲಿದ್ದು, ಈ ಕಾರ್ಯಕ್ರಮವನ್ನು ದೇಶದಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದೆ.
ಇನ್ನು ಕಾರ್ಯಕ್ರಮದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ಎಲ್ ಪಿಜಿ ನೇರ ಸೌಲಭ್ಯ ವರ್ಗಾವಣೆ, ಸಮಾನ ವೇತನ ಸಮಾನ ಪಿಂಚಣಿ ಯೋಜನೆ, ಜನ್ ಧನ್ ಯೋಜನೆಗಳನ್ನು ಹೈಲೈಟ್ ಮಾಡಲಾಗುತ್ತದೆ ಎಂದು ಹೇಳಿಕೊಂಡಿದೆ. ಇಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಗ್ರಾಮೀಣ ವಿದ್ಯುದೀಕರಣ ಸೇರಿದಂತೆ ಮುಂತಾದ ಯೋಜನೆಗಳ ಯಶಸ್ಸಿನ ಕಿರು ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.