ಪನಾಮಾ : ವಿದೇಶಗಳಲ್ಲಿನ ಸರ್ವರ್ಗಳ ಮೂಲಕ ಹ್ಯಾಕ್ ಮಾಡಲಾದ ಪರಿಣಾಮವಾಗಿ ಪನಾಮಾ ಪೇಪರ್ ಗಳು ಸೋರಿಕೆ ಆಗಿವೆ ಎಂದು ಈ ವಿವಾದದ ಕೇಂದ್ರ ಸ್ಥಾನದಲ್ಲಿರುವ ಮೊಸ್ಸಾಕ್ ಫೊನ್ಸೆಕಾ ಕಾನೂನು ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ರೇಮನ್ ಫೊನ್ಸೆಕಾ ತಿಳಿಸಿದ್ದಾರೆ.
ಪನಾಮಾ ಪೇಪರ್ ಲೀಕ್ ಕುರಿತಾದ ಯಾವುದೇ ವರದಿಯಲ್ಲಿ ಕಾನೂನು ಸಂಸ್ಥೆಯ ಸರ್ವರ್ ಹ್ಯಾಕ್ ಆದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ; ಸಂಸ್ಥೆಯ ವಿದೇಶೀ ಸರ್ವರ್ ಹ್ಯಾಕ್ ಮಾಡಲ್ಪಟ್ಟದ್ದೇ ಪನಾಮಾ ಪೇಪರ್ ಲೀಕ್ ಆಗಲು ಕಾರಣವಾಗಿದ್ದು ಇದುವೇ ಅತೀ ಮುಖ್ಯ ಅಪರಾಧವಾಗಿದೆ ಎಂದು ರೇಮನ್ ಫೊನ್ಸೆಕಾ ಹೇಳಿದ್ದಾರೆ.
ವಿದೇಶದಲ್ಲಿರುವ ಸರ್ವರ್ಗಳ ಮೂಲಕ ನಮ್ಮ ಮೇಲೆ ಹ್ಯಾಕಿಂಗ್ ನಡೆದಿರುವ ಬಗ್ಗೆ ನಮಗೆ ತಾಂತ್ರಿಕ ವರದಿಗಳು ಸಿಕ್ಕಿವೆ. ಆ ಪ್ರಕಾರ ನಾವು ಪನಾಮಾ ಪ್ರಾಸಿಕ್ಯೂಟರ್ ಅವರಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದೇವೆ ಎಂದು ಹೇಳಿದರು. ಆದರೆ ನಿರ್ದಿಷ್ಟವಾಗಿ ಯಾವ ದೇಶದಿಂದ ಹ್ಯಾಕಿಂಗ್ ನಡೆದಿದೆ ಎಂಬುದನ್ನು ರೇಮನ್ ಅವರು ಸ್ಪಷ್ಟಪಡಿಸಲಿಲ್ಲ.
ಭಾರತದ ಕೆಲವು ಪ್ರಸಿದ್ಧ ನಟರು, ಉದ್ಯಮಿಗಳು, ರಾಜಕಾರಣಿಗಳ ಸಹಿತ 500 ಮಂದಿ ವಿದೇಶಿ ತೆರಿಗೆ ಆಶ್ರಯಧಾಮಗಳಲ್ಲಿ ರಹಸ್ಯ ಸಂಪತ್ತು ಹೊಂದಿರುವ, ಹಣಕಾಸು ವ್ಯವಹಾರ, ಕಂಪೆನಿ ಸ್ಥಾಪನೆ, ಹೂಡಿಕೆಯಂತಹ ಚಟುವಟಿಕೆ ನಡೆಸಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಇದರ ಜತೆಗೆ ಪ್ರಪಂಚದ ಅನೇಕ ದೇಶಗಳ ಅಧ್ಯಕ್ಷರು, ಪ್ರಧಾನಿಗಳ ಸಹಿತ ನೂರಾರು ವಿಶ್ವ ನಾಯಕರು ಕೂಡ ಇದೇ ರೀತಿಯ ತೆರಿಗೆ ವಂಚನೆ ವ್ಯವಹಾರ ನಡೆಸಿರುವುದು ಪನಾಮಾ ಪೇಪರ್ಸ್ ಹೆಸರಿನ ರಹಸ್ಯ ಕಡತಗಳ ಸೋರಿಕೆಯಿಂದ ಬಯಲಾಗಿತ್ತು.
ಭಾರತದ ಪೈಕಿ ನಟರಾದ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಕರ್ನಾಟಕದ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ರಾಜೇಂದ್ರ ಪಾಟೀಲ, ಹಲವು ರಾಜಕಾರಣಿ ಗಳು, ಉದ್ಯಮಿಗಳು ವಿದೇಶಿ ತೆರಿಗೆ ಆಶ್ರಯಧಾಮಗಳಲ್ಲಿ ರಹಸ್ಯ ಹಣಕಾಸು ವಹಿವಾಟು, ವ್ಯಾಪಾರ-ವಹಿವಾಟು ನಡೆಸಿರುವುದು ಇದರಿಂದ ಬಯಲಾಗಿತ್ತು. ಇನ್ನು ವಿಶ್ವನಾಯಕರ ಪೈಕಿ ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಕುಟುಂಬ, ಪಾಕ್ ಪ್ರಧಾನಿ ನವಾಜ್ ಷರೀಫ್, ಸೌದಿ ಅರೇಬಿಯಾ ದೊರೆ, ಉಕ್ರೇನ್ ಅಧ್ಯಕ್ಷ, ಬ್ರಿಟನ್ ಪ್ರಧಾನಿಯ ತಂದೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅತ್ಯಾಪ್ತರು, ಖ್ಯಾತ ಚಿತ್ರನಟ ಜಾಕಿ ಜಾನ್, ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಸಹಿತ ಹಲವಾರು ಮಂದಿ ಖ್ಯಾತನಾಮರು ವಿದೇಶಗಳಲ್ಲಿ ಸಾವಿರಾರು ಕೋಟಿ ಸಂಪತ್ತನ್ನು ಅಡಗಿಸಿಟ್ಟಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು.
ಭಾರತದ ಪ್ರಧಾನಿ ಮೋದಿ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಮಗ್ರ ತನಿಖೆ ನಡೆಸಲು ಸೂಚಿಸಿದ್ದಾರೆ. ಅದರನ್ವಯ ತನಿಖೆಗಾಗಿ ಭಾರತ ಸರ್ಕಾರ ಬಹುಸಂಸ್ಥೆಗಳ ತನಿಖಾ ತಂಡವನ್ನು ರಚಿಸಿದೆ.