ನವದೆಹಲಿ : ದೇಶದ ಮೊದಲ ಸೆಮಿ- ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ 'ಗತಿಮಾನ್ ಎಕ್ಸ್ಪ್ರೆಸ್'ಗೆ ಏ.5ರಂದು ಚಾಲನೆ ದೊರೆಯಲಿದೆ. ದೆಹಲಿ ಮತ್ತು ಆಗ್ರಾ ನಡುವೆ ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿರುವ ಈ ರೈಲು 105-110 ನಿಮಿಷದಲ್ಲಿ 184 ಕಿ.ಮೀ. ದೂರವನ್ನು ಕ್ರಮಿಸಲಿದೆ.
ಗತಿಮಾನ್ ಎಕ್ಸ್ಪ್ರೆಸ್ ರೈಲಿನ ಅಂತಿಮ ಪರೀಕ್ಷೆ ಮಾ.22ರಂದು ಮುಗಿದಿದ್ದು, ದೆಹಲಿಯ ಹಜರತ್ ನಿಜಾ ಮುದ್ದೀನ್ ನಿಲ್ದಾಣದಿಂದ ಆಗ್ರಾಕ್ಕೆ ಪ್ರಯಾಣಿಕರೊಂದಿಗೆ ಪಯಣ ಬೆಳೆಸಲು ಸಚಿವಾಲಯದ ಅನುಮೋದನೆಗೆ ಕಾಯಲಾಗುತ್ತಿದೆ. ಇಡೀ ರೈಲನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ನಿರ್ಮಿಸಲಾಗಿದೆ. ಬೋಗಿಗಳನ್ನು ಪಂಜಾಬ್ನ ಕಪೂರ್ತಲಾ ರೈಲ್ವೆ ಕೋಚ್ ಕಾರ್ಖಾನೆಯಲ್ಲಿ ನಿರ್ಮಿಸಲಾಗಿದೆ. ಜೈವಿಕ ಶೌಚಾಲಯಗಳನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿದೆ. ಇನ್ನುಳಿದ ಒಳಭಾಗಗಳನ್ನು ಭಾರತೀಯ ಕಂಪನಿಗಳು ನಿರ್ಮಿಸಿದ್ದು, ರೈಲಿನ ನಿರ್ಮಾಣಕ್ಕೆ 50 ಕೋಟಿ ರೂ. ವ್ಯಯವಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಪ್ರತಿಬೋಗಿಯಲ್ಲಿ ಕಸ ಹಾಕಲು ಡಬ್ಬಿ, ಎಲ್ಇಡಿ ಬಲ್ಬ್ ಬಳಕೆ, ಓದಲು ಅನುಕೂಲವಾಗುವಂತೆ ಬಲ್ಬಗಳ ಅಳವಡಿಕೆ, ಬೋಗಿಯ ಒಳಗೆ ಸುಂದರ ಪೇಂಟಿಂಗ್, ಬ್ರೈಲ್ ಲಿಪಿಯಲ್ಲಿ ಮಾಹಿತಿ, ವಿಶೇಷ ಭೋಜನ ವ್ಯವಸ್ಥೆ ರೈಲಿನ ವಿಶೇಷತೆಗಳು.