ಬೆಂಗಳೂರು : ಏಪ್ರಿಲ್ 1, ಮುರ್ಖರ ದಿನವಾದ ಇಂದಿನಿಂದ ಪೆಟ್ರೋಲ್, ಡೀಸೆಲ್, ಖಾಸಗಿ ಬಸ್, ಟಿವಿ, ಡಿಟಿಎಚ್, ಎಂಎಸ್ಒ, ವಿದ್ಯುತ್, ಆಸ್ತಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮದ್ಯ, ಭೂದಾನ, ಭೂಗುತ್ತಿಗೆ ಹೀಗೆ ಎಲ್ಲದರ ಬೆಲೆ ಏರಿಕೆ ಆರಂಭವಾಗಲಿದೆ.
ಅದರಂತೆ ಇಂದಿನಿಂದ ದುಬಾರಿ ದುನಿಯಾ ಆರಂಭವಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆರಂಭವಾಗಲಿರುವುದರಿಂದ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬೀಳಲಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದು ಬರಲಿದೆ.
ಬಜೆಟ್ ನಲ್ಲಿಯ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದ್ದು, ಬಜೆಟ್ನಲ್ಲಿ ಘೋಷಿಸಿದ ತೆರಿಗೆ ಹೆಚ್ಚಳದ ಹೊರೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ) ಪ್ರಕಟಿಸಿದ ವಿದ್ಯುತ್ ದರ ಏರಿಕೆ ಬರೆ ಕೂಡ ಶುಕ್ರವಾರದಿಂದ ಅನ್ವಯ ಆಗಲಿದೆ.
ಬೆಲೆ ಹೆಚ್ಚಳ ಆಗಲಿರುವ ವಿವರ ಹೀಗಿದೆ:
* ಪೆಟ್ರೋಲ್- ಶೇ. 26ರಿಂದ ಶೇ. 30ಕ್ಕೆ ಏರಿಕೆ
* ಡೀಸೆಲ್- ಶೇ. 16.65ರಿಂದ ಶೇ. 19ಕ್ಕೆ ಏರಿಕೆ
* ಮಾರ್ಗಸೂಚಿ ದರ- ಸರಾಸರಿ ಕನಿಷ್ಠ ಶೇ. 10 ಮತ್ತು ಗರಿಷ್ಠ 30ರಷ್ಟು ಹೆಚ್ಚಳ
* ವಿದ್ಯುತ್- ಈಗಿರುವ ದರದಲ್ಲಿ ಶೇ. 9ರಷ್ಟು ಏರಿಕೆ (ಯೂನಿಟ್ಗೆ ಸರಾಸರಿ 48 ಪೈಸೆ)
* ಖಾಸಗಿ ಬಸ್- ಒಂದು ಸೀಟಿಗೆ ಮೂರು ತಿಂಗಳಿಗೆ ಇದ್ದ ತೆರಿಗೆ 2,700ರಿಂದ 3,500 ರೂ.ಗೆ ಏರಿಕೆ (ಆಲ್ ಇಂಡಿಯಾ ಪರ್ಮಿಟ್ ಮಾತ್ರ)
* ಮದ್ಯ- ಅಬಕಾರಿ ಸುಂಕ 45ರಿಂದ 50 ರೂ. (ಹೆಚ್ಚುವರಿ ಅಬಕಾರಿ ಸುಂಕ ಶೇ. 4ರಿಂದ 12ಕ್ಕೆ ಹೆಚ್ಚಳ)
* ಬಿಯರ್- ಅಬಕಾರಿ ಸುಂಕ 5ರಿಂದ 10 ರೂ. (ಹೆಚ್ಚುವರಿ ಅಬಕಾರಿ ಸುಂಕ ಶೇ. 135ರಿಂದ ಶೇ. 150)
* ಡಿಟಿಎಚ್ ಮತ್ತು ಎಂಎಸ್ಒ- ಶೇ. 4ರಿಂದ ಶೇ. 10ಕ್ಕೆ ಹೆಚ್ಚಳ
* ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ತೆರಿಗೆ ವಸತಿ ಕಟ್ಟಡಗಳಿಗೆ ಶೇ. 20 ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ. 25ರಷ್ಟು ಹೆಚ್ಚಳವಾಗಿದೆ.