ಬೆಂಗಳೂರು : ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ)ವು ಬುಧವಾರ ವಿದ್ಯುತ್ ದರ ಪರಿಷ್ಕರಣೆ ಮಾಡಲಿದ್ದು, ರಾಜ್ಯದ ಜನರಿಗೆ ಕರೆಂಟ್ 'ಶಾಕ್' ನೀಡಲಿದೆ. ಪ್ರತಿ ಯೂನಿಟ್ಗೆ 34ರಿಂದ 38 ಪೈಸೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆ.ಇ.ಆರ್.ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಬೆಳಗ್ಗೆ 11.30ಕ್ಕೆ ದರ ಪರಿಷ್ಕರಣೆ ಪಟ್ಟಿ ಪ್ರಕಟಿಸಲಿದ್ದಾರೆ.
ಆಯೋಗದ ಮೂಲಗಳ ಪ್ರಕಾರ ಗೃಹ ಮತ್ತು ವಾಣಿಜ್ಯ ಬಳಕೆ ಸಹಿತ ಬಹುತೇಕ ಎಲ್ಲ ಪ್ರಕಾರದ ಗ್ರಾಹಕರಿಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ ಸರಾಸರಿ 34ರಿಂದ 38 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಎಪ್ರಿಲ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು, ಬರುವ ತಿಂಗಳ ಬಿಲ್ ನಲ್ಲೇ ಈ ಬಿಸಿ ಗ್ರಾಹಕರಿಗೆ ತಟ್ಟುವ ನಿರೀಕ್ಷೆ ಇದೆ.
ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಖರೀದಿ ಮತ್ತು ಪೂರೈಕೆಯಲ್ಲಿನ ಅಂತರದಿಂದ ಆಗುತ್ತಿರುವ ಆರ್ಥಿಕ ಹೊರೆ ತಗ್ಗಿಸಲು ಪ್ರತಿ ಯೂನಿಟ್ಗೆ ಸರಾಸರಿ 1.02 ರೂ. ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಕಳೆದ ಆರೆಂಟು ವರ್ಷಗಳಲ್ಲೇ ಅತಿ ಹೆಚ್ಚು ದರ ಏರಿಕೆ ಪ್ರಸ್ತಾವನೆ ಆಗಿದೆ. ಎಸ್ಕಾಂಗಳು ಮುಂದಿಟ್ಟ ಈ ದರ ಏರಿಕೆ ಪ್ರಸ್ತಾವನೆಯ ಬಗ್ಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕೆ.ಇ.ಆರ್.ಸಿ ಪ್ರವಾಸ ಕೈಗೊಂಡು, ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿತ್ತು. ಅಂತಿಮವಾಗಿ ಎಷ್ಟು ಪೈಸೆಗೆ ಅನುಮೋದನೆ ನೀಡಲಾಗಿದೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.