ಕೈರೋ : ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಪ್ರಯಾಣ ಬೆಳೆಸಿದ್ದ ಈಜಿಪ್ಟ್ ಏರ್ ನ ವಿಮಾನವನ್ನು ಪ್ರಯಾಣಿಕರಲ್ಲಿ ಒಬ್ಬನಾಗಿದ್ದ ಶಸ್ತ್ರಧಾರಿ ಆಗಂತುಕನೊಬ್ಬ ಅಪಹರಣ ಮಾಡಿದ್ದಾನೆ. ಅಪಹರಣವಾದ ಕೆಲ ಹೊತ್ತಿನ ಬಳಿಕ ಇದು ಉಗ್ರರ ಕೃತ್ಯವಲ್ಲ ಎಂದು ತಿಳಿದುಬಂದಿದೆ.
ಕೈರೋದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ವಿಮಾನವನ್ನು ಅಪಹರಣಕಾರ ಸೈಪ್ರಸ್ ದೇಶದ ಲರ್ನಾಕಾ ನಿಲ್ದಾಣದಲ್ಲಿ ಬಲವಂತವಾಗಿ ಲ್ಯಾಂಡ್ ಮಾಡಿಸಿದ್ದಾನೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 62 ಮಂದಿ ಪ್ರಯಾಣಿಕರಿದ್ದರು. ಲ್ಯಾಂಡ್ ಆದ ಕೆಲ ಹೊತ್ತಿನ ಬಳಿಕ ವಿಮಾನದ 5 ಮಂದಿ ಸಿಬಂದಿ ಮತ್ತು 5 ಮಂದಿ ವಿದೇಶಿ ಪ್ರಯಾಣಿಕರನ್ನು ಹೊರತು ಪಡಿಸಿ ಉಳಿದೆಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಬಿಟ್ಟಿದ್ದಾನೆ. ವಿಮಾನದಲ್ಲಿ 8 ಮಂದಿ ಬ್ರಿಟನ್ ಪ್ರಜೆಗಳು ಮತ್ತು 10 ಮಂದಿ ಅಮೆರಿಕನ್ ಪ್ರಜೆಗಳು ಇದ್ದರು.
ವಿಮಾನ ಅಪಹರಣಕಾರ ಸೈಫ್ ಎಲ್ಡಿನ್ ಮುಸ್ತಫಾ ಎಂದು ತಿಳಿದುಬಂದಿದೆ. ಪ್ರಯಾಣಿಕರನ್ನು ಬಿಡುಗಡೆ ಮಾಡಲು ಮುಂದಾಗಿದ್ದ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ವಿಮಾನದ ಬಳಿ ಬಾರದಂತೆ ಎಚ್ಚರಿಕೆ ನೀಡಿದ್ದು, ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ನಡುವೆ ವಿಮಾನ ಅಪಹರಣಕಾರ ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಪಶುವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಎಂದು ವಿವಿ ವೆಬ್ಸೈಟ್ ಹೇಳಿಕೊಂಡಿದೆ. ಅಪಹರಣಕಾರನ ಮಾಜಿ ಪತ್ನಿ ಲರ್ನಾಕಾ ನಗರದಲ್ಲಿ ವಾಸಿಸುತ್ತಿದ್ದು, ಆಕೆಗೆ ನೀಡುವಂತೆ ಪತ್ರವೊಂದನ್ನು ವಿಮಾನದಿಂದ ಹೊರಗೆ ಎಸೆದಿದ್ದಾನೆ.
ಆತನ ಬೇಡಿಕೆಯಂತೆ ಮಾಜಿ ಪತ್ನಿ ಮರೀನಾ ಪರಶ್ ಕೌ ಅವರನ್ನು ಮಾತುಕತೆಗಾಗಿ ಲರ್ನಾಕಾ ನಿಲ್ದಾಣಕ್ಕೆ ಕರೆಸಿಕೊಳ್ಳಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಬಿಡುಗಡೆ ಮಾಡುವಂತೆ ಅಧಿಕಾರಿಗಳು ಸಂಧಾನ ಯತ್ನ ಮುಂದುವರೆಸಿದ್ದಾರೆ. ಅಲ್ಲದೇ ಈಜಿಪ್ಟ್ ನ ಜೈಲಿನಲ್ಲಿರುವ ಮಹಿಳಾ ಖೈದಿಗಳನ್ನು ಬಿಡುಗಡೆ ಮಾಡುವಂತೆಯೂ ಈತ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.