ಬೆಂಗಳೂರು : ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಸೋಮವಾರದಿಂದ ರಾಜ್ಯಾದ್ಯಂತ ಇದು ಜಾರಿಗೆ ಬರಲಿದೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜ.21ರಿಂದಲೇ ನಿಯಮ ಉಲ್ಲಂಘನೆಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಉಳಿದ 21 ಜಿಲ್ಲೆಗಳಲ್ಲಿ ಪೊಲೀಸರು ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸಿದ್ದರು. ಫೆ.1ರಿಂದ ರಾಜ್ಯಾದ್ಯಂತ ನಿಯಮ ಕಡ್ಡಾಯವಾಗಲಿದೆ.
ರಾಜ್ಯದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವ ಕಡ್ಡಾಯ ನೀತಿ ಜನವರಿ 12ರಿಂದಲೇ ಜಾರಿಗೆ ಬಂದಿದೆ. ಆದರೆ, ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದನ್ನು ಮುಂದೂಡಿದ್ದ ಪೊಲೀಸರು, ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ಬೆಂಗಳೂರು ನಗರ, ಗ್ರಾಮಾಂತರ, ಉತ್ತರ ಕನ್ನಡ, ಯಾದಗಿರಿ, ಬೀದರ್, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜ.21ರಿಂದಲೇ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದರೆ, ಶಿವಮೊಗ್ಗ, ರಾಯಚೂರು ಜಿಲ್ಲೆಗಳಲ್ಲಿ ಜ.25ರಿಂದ ದಂಡ ವಿಧಿಸಲಾಗುತ್ತಿತ್ತು.
ತುಮಕೂರು, ದಕ್ಷಿಣ ಕನ್ನಡ, ಬಾಗಲಕೋಟೆ, ಉಡುಪಿ, ಕೊಡಗು, ಮೈಸೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಹಾವೇರಿ, ಗದಗ ಸೇರಿ 21 ಜಿಲ್ಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಪೊಲೀಸರ ಕ್ರಮ ಜ.31ರವರೆಗೂ ನಡೆದಿದ್ದು, ಸೋಮವಾರದಿಂದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ದಂಡ ವಿಧಿಸಲಾಗುವುದು.