BW News Bureau : ಅಲ್ ಖೈದಾ ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೌಲಾನಾ ಅನ್ಸರ್ ಶಾ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಮದ್ರಸಾವೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಅನ್ಸರ್ ಶಾನನ್ನು ಬುಧವಾರ ರಾತ್ರಿ ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದ್ದು, ಗುರುವಾರ ಆತನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಅನ್ಸರ್ ಶಾ ನನ್ನು ಇದೇ ತಿಂಗಳ 20ನೇ ತಾರೀಖೀನವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಅನ್ಸರ್ನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ತನಿಖೆಯ ಬಳಿಕವಷ್ಟೇ ಹೆಚ್ಚಿನ ವಿವರ ಬಹಿರಂಗಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಬಂಧಿತ ಅನ್ಸರ್ ಶಾ ಭಾರತೀಯ ಉಪಖಂಡದ ಅಲ್ ಖೈದಾ ಜಾಲದ ಸಕ್ರಿಯ ಕಾರ್ಯಕರ್ತನಾ ಗಿದ್ದು, ಉಗ್ರವಾದಿ ಸಂಘಟನೆಗೆ ಹಣಕಾಸು ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿ ಕೊಂಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ಮೂಲ ಭೂತವಾದದ ಪ್ರಚಾರ ನಡೆಸಿ, ಯುವಕರನ್ನು ಆಕರ್ಷಿಸುತ್ತಿದ್ದ. ಉಗ್ರ ವಾದಕ್ಕೆ ಪ್ರಚೋದನೆ ನೀಡುತ್ತಿದ್ದ. ದೇಶದಲ್ಲಿ ಅನೇಕ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.