ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಮಾಸ್ಕೋವಿನಲ್ಲಿ ಗುರುವಾರ ರಷ್ಯಾ ಅಧ್ಯಕ್ಷ ವಾಡ್ಲಮೀರ್ ಪುಟಿನ್ ಅವರ ಜೊತೆ ಮಾತುಕತೆ ನಡೆಸಿದ ನಂತರ ರಕ್ಷಣಾ ಮತ್ತು ಪರಮಾಣು ಶಕ್ತಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.
ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ಕೆಲವು ಒಪ್ಪಂದಗಳಿಗೆ ಅಂತಿಮ ರೂಪ ಕೊಡಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಸುಬ್ರಮಣ್ಯಂ ಜೈಶಂಕರ್ ತಿಳಿಸಿದ್ದಾರೆ.
ಕಳೆದ ವಾರ ರಕ್ಷಣಾ ಸಚಿವಾಲಯ ೪೦,೦೦೦ ಕೋಟಿ ರೂ ಮೌಲ್ಯದ ಎಸ್ 400 ಟ್ರಿಂಫ್ ವಾಯು ರಕ್ಷಣಾ ಕ್ಷಿಪಣಿ ಖರೀದಿಗೆ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಇಬ್ಬರೂ ಸಹ ರಕ್ಷಣಾ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿಯೂ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಜೈಶಂಕರ್ ತಿಳಿಸಿದರು. ಈ ಸಂದರ್ಭದಲ್ಲಿ ಸಿರಿಯಾದ ಪರಿಸ್ಥಿತಿ ಮತ್ತು ಭಯೋತ್ಪಾದನೆ ಎದುರಿಸುವ ಬಗ್ಗೆ ಸಹ ಚರ್ಚೆ ಆಗಬಹುದೆಂದು ಜೈಶಂಕರ್ ಹೇಳಿದರು.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ೩೦೦೦ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.