ಹುಬ್ಬಳ್ಳಿ : ಧಾರವಾಡಕ್ಕೆ ಮಂಜೂರಾಗಿರುವ ಐಐಟಿಯನ್ನು ರಾಯಚೂರಿಗೆ ಸ್ಥಳಾಂತರಿಸುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್ ನಡೆಸಲಾಗಿದೆ. ಬಿಜೆಪಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳಿಂದ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಬಂದ್ಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.
ಹೈದರಾಬಾದ್-ಕರ್ನಾಟಕದಲ್ಲಿ ಸೆಂಟ್ರಲ್ ವಿಶ್ವವಿದ್ಯಾಲಯವಿದೆ. ಜತೆಗೆ ಆ ಭಾಗಕ್ಕೆ ವಿಶೇಷ ಸ್ಥಾನಮಾನ ಕೂಡ ದೊರೆತಿದೆ. ಆದ್ದರಿಂದ, ಧಾರವಾಡಕ್ಕೆ ಮಂಜೂರಾಗಿರುವ ಐಐಟಿ ಅನ್ನು ಧಾರವಾಡದಲ್ಲೇ ಉಳಿಸಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.
ಯಾವುದೇ ಕಾರಣಕ್ಕೂ ಐಐಟಿ ಸ್ಥಳಾಂತರಕ್ಕೆ ಅವಕಾಶ ಕೊಡಲ್ಲ ಎಂದು ಕಿಡಿಕಾರಿರುವ ಪ್ರತಿಭಟನಾಕಾರರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಸಾರ್ವಜನಿಕರು ಬೆಂಬಲ ನೀಡಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬಂದ್ ವೇಳೆ ಕಲ್ಲುತೂರಾಟ ನಡೆಸುವ ಸಾಧ್ಯತೆಯನ್ನು ಮನಗಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಮುಂಜಾಗ್ರತಾ ಕ್ರಮವಾಗಿ ಅವಳಿ ನಗರಗಳ ಒಳ ಬರುವ ಹಾಗೂ ಹೊರ ಹೋಗುವ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಿ ಆದೇಶ ಹೊರಡಿಸಿದ್ದಾರೆ.