ಬೆಂಗಳೂರು : ಸರ್ಕಾರ ಮಂಗಳವಾರವೂ ಕೂಡಾ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿದೆ. ಸರ್ಕಾರದ ಈ ಕ್ರಮಕ್ಕೆ ಮೈಸೂರಿನಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರೈತ ಸಂಘಟನೆ ಮತ್ತು ಕನ್ನಡಪರ ಸಂಘಗಳು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಕಬಿನಿ ಜಲಾಶಯದಿಂದ ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಸೋಮವಾರ ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದರು. ಸರ್ಕಾರದ ನಡೆ ವಿರುದ್ಧ ರೈತರು ಕಿಡಿಕಾರಿದ್ದರು.
ಕಬಿನಿ ಮತ್ತು ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದು ನಿಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ. ಸಂಕಷ್ಟ ಸೂತ್ರದಂತೆ ಇರುವ ನೀರನ್ನು ಹಂಚಿಕೊಳ್ಳಬೇಕು. ಆದರೆ ತಮಿಳುನಾಡು ಕೇಳಿದಷ್ಟು ನೀರು ಕೊಡಲು ಆಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.