ಬೆಂಗಳೂರು : ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಮಂಜುನಾಥ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಮೇಯರ್ ಆಗಿ ಆಯ್ಕೆ ಆದ ಬಿ ಎನ್ ಮಂಜುನಾಥ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ 5 ವರ್ಷ ಮುಂದುವರಿಯುತ್ತದೆ. ಮೈತ್ರಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಬಿಬಿಎಂಪಿಗೆ ಸರ್ಕಾರದ ಸಂಪೂರ್ಣ ಸಹಕಾರ ಇರುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದ ಪಣ ತೊಟ್ಟಿದೆ. ಬ್ರ್ಯಾಂಡ್ ಬೆಂಗಳೂರು ಖ್ಯಾತಿ ಮುಂದುವರಿಸುತ್ತೇವೆ ಎಂದು ಹೇಳಿದರು.
ನಂತರ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ರಾಜ್ಯ ಉಸ್ತುವಾರಿ ಸಚಿವ ದಿಗ್ವಿಜಯ ಸಿಂಗ್ ಅವರು ಈಗ ಅಮೇರಿಕಾ ಪ್ರವಾಸದಲ್ಲಿದ್ದು, ಅವರು ಪ್ರವಾಸದಿಂದ ವಾಪಾಸ್ ಆದ ನಂತರ, ಅವರ್ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊೞಲಾಗುವುದು ಎಂದು ತಿಳಿಸಿದರು.