ದುಬೈ : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಗೆ ಎರಡು ದಿನಗಳ ಐತಿಹಾಸಿಕ ಭೇಟಿ ನೀಡಿದ್ದರ ಫಲ ಈಗ ಕಾಣತೊಡಗಿದೆ.
ಪ್ರಧಾನಿ ಮೋದಿ ಭೇಟಿಯ ವೇಳೆ ಯುಎಇ ಭಾರತದಲ್ಲಿ 75ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ವಾಗ್ದಾನ ಮಾಡಿತ್ತು.
ಭಾರತದೊಂದಿಗೆ ಬಾಂಧವ್ಯ ವೃದ್ಧಿಸಲು ಯುಎಇ ಉತ್ಸುಕವಾಗಿದ್ದು, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಸ್ಮಾರ್ಟ್ ಸಿಟಿ ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ತಯಾರಿದೆ ಎಂದು ಗುರುವಾರ ಯುಎಇ ಹೇಳಿದೆ.
'ಭಾರತಕ್ಕೆ ಅನೇಕ ಯೋಜನೆಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಹರಿದು ಬರುವಂತೆ ಮಾಡಲು ನಾವು ಕಟಿಬದ್ಧರಾಗಿದ್ದೇವೆ. ನಿಮ್ಮ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ನಿಮ್ಮಿಂದ ಇನ್ನಷ್ಟು ಮಾಹಿತಿ ಪಡೆಯಲು ನಾನು ಕಾತುರನಾಗಿದ್ದೇನೆ' ಎಂದು ಯುಎಇ ದೇಶದ ವಿದೇಶಾಂಗ ಸಚಿವೆ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಹೇಳಿದ್ದಾರೆ.
ಈ ವಿಚಾರದಲ್ಲಿ ಮೂಲಸೌಕರ್ಯ ಅತ್ಯಂತ ಪ್ರಮುಖವಾಗಿದ್ದು, ಅದು ಮಾರುಕಟ್ಟೆ ವಿಸ್ತರಿಸಲು ಅವಕಾಶಮಾಡಿಕೊಡುತ್ತದೆ, ಅಲ್ಲದೆ, (ಉಭಯ ದೇಶಗಳ) ಜನರ ಮಧ್ಯೆ ಬಾಂಧವ್ಯ ವೃದ್ಧಿಗೆ ಅವಕಾಶ ಮಾಡಿಕೊಡುತ್ತದೆ' ಎಂದು ಅವರು ಹೇಳಿದರು.
ಮುಂದುವರಿದು, ಭಾರತದೊಂದಿಗೆ ಇರುವ ಸಂಬಂಧವನ್ನು 'ಹೊಸ ಆಯಕಟ್ಟಿನ ಸ್ಥರ'ಕ್ಕೆ ಕೊಂಡೊಯ್ಯುವ ಬಗ್ಗೆ ಯುಎಇ ಬದ್ಧವಾಗಿದೆ ಎಂದು ಅವರು ಹೇಳಿದರು.
ದುಬೈ ಪೋರ್ಟ್ ವರ್ಲ್ಡ್ ನ್ನು ಉದಾಹರಿಸುತ್ತ, ಸಚಿವೆ ನಹ್ಯಾನ್, 'ನಾವು ಇನ್ನಷ್ಟು ಪ್ರಗತಿ ಮಾಡಲಿಛ್ಚಿಸುತ್ತೇವೆ, ನಮಗೆ ಸಾಮರ್ಥ್ಯ ಹಾಗೂ ಇನ್ನಷ್ಟು ಹೆಚ್ಚಿನ ಕೆಲಸ ಮಾಡುವ ನಡೆಸುವ ಇಛ್ಛಾಶಕ್ತಿ ಇದೆ' ಎಂದರು.
ದುಬೈ ಆಯೋಜಿಸಲಿರುವ ವಿಶ್ವ ಮೇಳ 2020ರ ಬಗ್ಗೆ ಮಾತನಾಡುತ್ತ, ಇದರ ಯಶಸ್ಸಿಗೆ ನಮ್ಮ ಭಾರತೀಯ ಮಿತ್ರರು ಮತ್ತು ಸಹಯೋಜಕರ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ' ಎಂದು ಹೇಳಿದರು.
ಉಭಯ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟುಗಳನ್ನು ಮುಂದಿನ ವರ್ಷಗಳಲ್ಲಿ ಶೇ.50 ರಿಂದ ಶೇ.60 ರಷ್ಟು ವೃದ್ಧಿಸುವುದಕ್ಕೆ ಎರಡೂ ದೇಶಗಳು ಬದ್ಧವಾಗಿವೆ ಎಂದು ಸಚಿವೆ ನಹ್ಯಾನ್ ಹೇಳಿದರು.
ಯುಎಇ ತನ್ನ ಬಂದರು ಮತ್ತು ವಿಮಾನ ನಿಲ್ದಾಣಗಳಿಂದ ಬಹುತೇಕ ಎಲ್ಲ ಪ್ರಮುಖ ನಗರಗಳೊ೦ದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಭಾರತದ ಕೈಗಾರಿಕೆಗಳು ಆಫ್ರಿಕ ಮುಂತಾದ ದೇಶಗಳೊಂದಿಗೆ ವ್ಯಾಪಾರ ನಡೆಸಲು ಈ ಅವಕಾಶಗಳನ್ನು ಉಪಯೋಗಿಸಬಹುದು ಎಂದರು. 'ಆಫ್ರಿಕದಲ್ಲಿ ಭಾರತ ಉತ್ತಮ ವಹಿವಾಟು ನಡೆಸುತ್ತಿದೆ ಎಂದು ನನಗೆ ಅರಿವಿದೆ ಎಂದು ಅವರು ಹೇಳಿದರು.