ನವದೆಹಲಿ : 92 ಶೇ. ಭಾರತೀಯ ಮುಸ್ಲಿಂ ಮಹಿಳೆಯರು ಮೂರು ಸಲ ಹೇಳುವ, ಮೌಖಿಕ, ಏಕಪಕ್ಷೀಯ ತಲಾಖ್ (ವಿಛ್ಚೇದನ) ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಬಯಸುತ್ತಾರೆ.
ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ್ ಎಂಬ ಸರಕಾರೇತರ ಸಂಸ್ಥೆ ದೇಶದ 10 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಮಹುತೇಕ ಮುಸ್ಲಿಂ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಮತ್ತು ಕನಿಷ್ಠ ಸಾಕ್ಷರತೆ ಹೊಂದಿದವರಾಗಿದ್ದಾರೆ.
ವರದಿಯಲ್ಲಿ, ಅರ್ಧಕ್ಕಿಂತ ಹೆಚ್ಚಿನ ಮಹಿಳೆಯರು 18 ವರ್ಷ ತುಂಬುವ ಮೊದಲೇ ವಿವಾಹಿತರಾಗಿದ್ದಾರೆ ಹಾಗೂ ಅವರಲ್ಲಿ ಶೇ.53ರಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಕೌಟುಂಬಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
ಸ್ಕೈಪ್, ಮೊಬೈಲ್ ಮೆಸೇಜ್, ಈಮೈಲ್ ಮತ್ತು ವಾಟ್ಸಾಪ್ ಮೂಲಕ ಏಕಪಕ್ಷೀಯ, ಮೌಖಿಕ ಹಾಗೂ ಮೂರು ಸಲ ಅರುಹಿ ತಲಾಖ್ ಕೊಡುವುದು ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.
ವರದಿಯ ಲೇಖಕ ಝಾಕಿಯಾ ಸೋಮನ್ ಹೇಳುವಂತೆ 2014ರಲ್ಲಿ, 235 ಘಟನೆಗಳು ಎನ್.ಜಿ.ಒ ಸಂಸ್ಥೆ ನಡೆಸುವ ಶರಿಯಾ ಅದಾಲತ್ ಗೆ ಬಂದಿದ್ದು, ಇದರಲ್ಲಿ ಶೇ.80 ಕೇಸುಗಳು ಮುಖಿಕ ತಲಾಖ್ ಗೆ ಸಂಬಂಧಿಸಿದವು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಲ್ಲದೆ, ಸಮೀಕ್ಷೆಗೆ ಒಳಗಾದ ಶೇ.91 ಮಹಿಳೆಯರು ತಮ್ಮ ಪತಿ ಎರಡನೇ ವಿವಾಹವಾಗುವುದನ್ನು ವಿರೋಧಿಸುತ್ತಾರೆ.
ಸಮೀಕ್ಷೆಗೆ ಒಳಪಟ್ಟ ಮಹಿಳೆಯರಲ್ಲಿ ಸುಮಾರು 73 ಶೇ. ಮಹಿಳೆಯರು ವಾರ್ಷಿಕ ರೂ.50,000ಕ್ಕಿಂತಲೂ ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ ಸೇರಿದವರು ಮತ್ತು ಅವರಲ್ಲಿ 55% ಮಹಿಳೆಯರಿಗೆ 18 ವರ್ಷ ಪ್ರಾಯ ತುಂಬುವ ಮೊದಲೇ ವಿವಾಹವಾಗಿದೆ.
ಶೇ.82 ಮಹಿಳೆಯರಿಗೆ ಸ್ವಂತ ಹೆಸರಲ್ಲಿ ಆಸ್ತಿ ಇಲ್ಲ ಹಾಗೂ 78% ಮಹಿಳೆಯರು ಗೃಹಿಣಿಯರು.
ಸಮೀಕ್ಷೆಯಲ್ಲಿ ಸುಮಾರು 4,710 ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದಾರೆ. ಈ ಸಮೀಕ್ಷೆ 2013ರ ಜುಲೈ-ಡಿಸೆಂಬರ್ ತಿಂಗಳುಗಳಲ್ಲಿ ನಡೆಸಲಾಗಿದೆ.