ಬೆಂಗಳೂರು : ಇಸ್ರೋ ಇದೇ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳನ್ನು 2015-16 ರ ಅವಧಿಯಲ್ಲಿ ಉಡಾವಣೆ ಮಾಡಲಿದೆ.
ಇಸ್ರೋದ ವಾಣಿಜ್ಯ ಅಂಗಸಂಸ್ಥೆ ಆಂಟ್ರಿಕ್ಸ್ ಕಾಪೋರೇಷನ್ 2015-16 ನೇ ಸಾಲಿನಲ್ಲಿ ಅಮೆರಿಕದ 9 ನ್ಯಾನೋ ಉಪಗ್ರಹಗಳ ಉಡಾವಣೆಯ ಗುತ್ತಿಗೆಯನ್ನು ಪಡೆದುಕೊಂಡಿರುವುದಾಗಿ ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ.
ಪಿಎಸ್ಎಲ್ವಿ ಉಡಾಹಕವನ್ನು ಬಳಸಿಕೊಂಡು ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದೆಂದು ಅವರು ಹೇಳಿದ್ದಾರೆ. ಈವರೆಗೆ ಇಸ್ರೋ ತನ್ನ ವಿವಿಧ ಉಡಾಹಕಗಳನ್ನು ಬಳಸಿಕೊಂಡು ಸುಮಾರು 19 ರಾಷ್ಟ್ರಗಳ 45 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಪುನರ್ಬಳಕೆ ಮಾಡಬಹುದಾದ ಉಡಾಹಕಗಳ ಪ್ರಾಯೋಗಿಕ ಹಾರಾಟ ಈ ವರ್ಷದ ಕೊನೆಯ ಭಾಗದಲ್ಲಿ ನಡೆಸಲಾಗುವುದೆಂದು ತಿರುವನಂತಪುರದ ವಿಕ್ರಮ್ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಕೆ. ಶಿವನ್ ತಿಳಿಸಿದ್ದಾರೆ. ಉಪಗ್ರಹವನ್ನು ನಿಗದಿತ ಕಕ್ಷೆಗೆ ಇರಿಸುವ 2 ಹಂತದ, ಸಂಪೂರ್ಣವಾಗಿ ಪುನರ್ಬಳಕೆ ಮಾಡಬಹುದಾದ ಉಡಾಹಕ ಇದಾಗಿರುವುದಾಗಿ ಅವರು ಹೇಳಿದ್ದಾರೆ.
ಜಿಎಸ್ಎಲ್ವಿ ಡಿ6 ಉಡಾಹಕದ ಬಗ್ಗೆ ಮಾಹಿತಿ ನೀಡಿದ ಅವರು, ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಾಣಗೊಂಡಿರುವ 2.5 ಟನ್ ತೂಕದ, ಸುಮಾರು ೨೫೦ ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ ಜಿಎಸ್ಎಲ್ವಿ ಡಿ6 ಉಡಾಹಕ ಆಗಸ್ಟ್ ತಿಂಗಳ ಕೊನೆಯಲ್ಲಿ ಉಡಾವಣೆಗೊಳ್ಳಲಿದೆ ಎಂದಿದ್ದಾರೆ.