ನಾಗ್ಪುರ : 1993ರ ಮುಂಬೈ ಸರಣಿ ಸ್ಪೋಟದ ರೋವಾರಿ ಯಾಕುಬ್ ಮೆಮೂನ್ ಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ವಿಫಲವಾದ ಕಾರಣ ಗುರುವಾರ ಆತನನ್ನು ಗಲ್ಲಿಗೇರಿಸಲಾಗಿದೆ.
ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ರಾತ್ರಿ ಮತ್ತೆ ಯಾಕುಬ್ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರ ನಿವಾಸದಲ್ಲಿ ಅರ್ಜಿ ಸಲ್ಲಿಸಿದ್ದ. ನಂತರ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, 3.20 ಕ್ಕೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತು.
ಬುಧವಾರ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಯಾಕುಬ್ನ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ತಿಳಿಸಿತ್ತು.
ಇದಲ್ಲೂ ಮೊದಲು ಯಾಕೂಬ್ ಮಹಾರಾಷ್ಟ್ರ ರಾಜ್ಯಪಾಲರ ಬಳಿ ಕ್ಷಮಾದಾನ ಅರ್ಜಿ ಹಾಕಿದ್ದ. ಆ ಅರ್ಜೀ ಸಹ ತಿರಸ್ಕೃತಗೊಂಡಿತ್ತು.
ಬುಧವಾರ ಸುಪ್ರೀಂಕೋರ್ಟ್ನಲ್ಲಿ ತನಗೆ ಗಲ್ಲು ಶಿಕ್ಷೆ ಆಗಬಹುದು ಎಂಬ ಆತಂಕದಿಂದ ಯಾಕುಬ್ ಎರಡನೇ ಬಾರಿಗೆ ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಅದೂ ಸಹ ತಿರಸ್ಕೃತಗೊಂಡಿತ್ತು.