ನವದೆಹಲಿ : ಸೋಮವಾರ ನಿಧರಾದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ದೆಹಲಿಯಿಂದ ತಮಿಳುನಾಡಿನ ರಾಮೇಶ್ವರಂಗೆ ಬುಧವಾರ ತರಲಾಗುತ್ತಿದೆ. ಈ ವಿಶೇಷ ವಿಮಾನ ಮಧುರೈ ತಲುಪಲಿದ್ದು, ಮಧುರೈ ಇಂದ ಹೆಲಿಕ್ಯಾಪ್ಟರ್ ನಲ್ಲಿ ರಾಮೇಶ್ವರಂ ಗೆ ಡಾ. ಕಲಾಂ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು.
ಡಾ. ಕಲಾಂ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ವಿಮಾನ ಬುಧವಾರ ಬೆಳಗ್ಗೆ 8.15ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ರಾಮೇಶ್ವರಂಗೆ ಪ್ರಯಾಣ ಆರಂಭಿಸಿದೆ.
ಪಾಲಂ ವಿಮಾನ ನಿಲ್ದಾಣದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭೂಸೇನೆ, ವಾಯು ಪಡೆ, ನೌಕಾಪಡೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಗುರುವಾರ ರಾಮೇಶ್ವರಂನಲ್ಲಿ ನಡೆಯುವ ಡಾ. ಕಲಾಂ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರ ಹಾಗೂ ಗಣ್ಯರು ಪಾಲ್ಗೊಳ್ಳುವರು.