BW News Bureau : ಈಗಾಗಲೇ ಚಾಲನೆಗೊಂಡಿರುವ ಓಕಳಿಪುರ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಜೊತೆಗೆ ಮೂರು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಎರಡು ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
2012ರಲ್ಲಿ ನಾಯಂಡಹಳ್ಳಿಯಿಂದ ಸಿಲ್ಕ್ ಬೋರ್ಡ್ ವರೆಗಿನ ಹೊರವರ್ತುಲ ರಸ್ತೆ ಹಾಗೂ ಹೋಪ್ಫಾರಂನಿಂದ ಮೇಖ್ರೀ ವೃತ್ತದವರೆಗಿನ ಹಳೆ ಮದ್ರಾಸ್ ರಸ್ತೆ ಸಿಗ್ನಲ್ ಮುಕ್ತ ಕಾರಿಡಾರ್ ನ ಘೋಷಣೆಯಾಗಿತ್ತು. ಆ ನಂತರ ಸಾಧ್ಯತಾ ವರದಿ (ಡಿ ಎಫ್ ಆರ್) ತರಿಸಲಾಗಿತ್ತು. ಸಾಧ್ಯತಾ ವರದಿ ಸಿದ್ದವಾದ ನಂತರ ಕೆಲಸ ಮುಂದುವರಿದಿರಲಿಲ್ಲ. ಈಗ ಈ ಎರಡು ಕಾರಿಡಾರ್ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವುದಾಗಿ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಹೇಳಿದ್ದಾರೆ.
ಈ ಎರಡೂ ಕಾಮಗಾರಿಯ ಅಂದಾಜು ವೆಚ್ಚ 337.95 ಕೋಟಿ ರೂ. ಈ ಹಿಂದೆ ಘೋಷಣೆ ಮಾಡಿದ್ದ ಈ ಎರಡೂ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ.
ಇದರೊಂದಿಗೆ, 18,500 ಕೋಟಿ ರೂ. ಮೊತ್ತದ ಮೂರು ಎಲಿವೇಟೆಡ್ ಕಾರಿಡಾರ್ ರಸ್ತೆಗಳ ನಿರ್ಮಾಣ ಯೋಜನೆಗಳ ಡಿಎಫ್ಆರ್ನ್ನು ಬಿಡಿಎ ವತಿಯಿಂದ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಈಗಾಗಲೇ ಚರ್ಚೆ ನಡೆಸಿದ್ದ ಕೆ.ಆರ್.ಪುರದಿಂದ ಯಶವಂತಪುರ, ಸಿಲ್ಕ್ ಬೋರ್ಡ್ನಿಂದ ನಿಂದ ಮೇಖ್ರೀ ವೃತ್ತ ಮತ್ತು ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೆ 6 ಪಥದ ಎಲಿವೇಟೆಡ್ ರಸ್ತೆಗೆ ಸಂಬಂಧಿಸಿದ ಡಿಎಫ್ಆರ್ ತಯಾರಿಗೂ ಬಿಬಿಎಂಪಿ ಟೆಂಡರ್ ಕರೆಯಲು ಸಿದ್ಧತೆ ಮಾಡಿತ್ತು. ಇದೀಗ ಬಿಡಿಎ ವತಿಯಿಂದ ಡಿಎಫ್ಆರ್ ಮಾಡಿಸುವುದು ಸೂಕ್ತ ಎಂಬ ಕಾರಣಕ್ಕೆ ಬಿಡಿಎಗೆ ವಹಿಸಲಾಗಿದೆ ಎಂದು ವಿಜಯಭಾಸ್ಕರ್ ಹೇಳಿದ್ದಾರೆ.