ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು 8 ದಿನಗಳ 5 ಮಧ್ಯ ಏಷಿಯಾ ರಾಷ್ಟ್ರಗಳು ಮತ್ತು ರಷ್ಯಾ ಪ್ರವಾಸಕ್ಕಾಗಿ ಇಂದು ದೆಹಲಿಯಿಂದ ತೆರಳಿದರು.
ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation)
ಶೃಂಗಸಭೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮಗಳೂ ಅಲ್ಲದೆ ಪ್ರಧಾನಿ ಮೋದಿ ತಾವು ಭೇಟಿ ನೀಡುವ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧ, ಆರ್ಥಿಕ ಮತ್ತು ಇಂಧನ ವಿಚಾರಗಳಲ್ಲಿ ವ್ಯವಹಾರ ವೃದ್ಧಿಗಳನ್ನು ಗುರಿಯಾಗಿಟ್ಟಿಕೊಂಡಿದ್ದಾರೆ.
ಸೋಮವಾರ ಉಜ್ಬೇಕಿಸ್ತಾನ್ ಗೆ ಭೇಟಿ ನೀಡಲಿರುವ ಪ್ರಧಾನಿ ಮಂಗಳವಾರ ಕಝಕಿಸ್ತಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಜುಲೈ 8ಕ್ಕೆ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 10ರಂದು ತುರ್ಕ್ಮೇನಿಸ್ತಾನಕ್ಕೆ ಮೋದಿ ಭೇಟಿ ನೀಡಲಿದ್ದು, ಜುಲೈ 11ರಂದು ಕಿರ್ಗಿಝ್ಸ್ತಾನ್ ಹಾಗೂ ಜುಲೈ 12ರಂದು ತಜಿಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ಶಾಂಘೈ ಶೃಂಗ ಸಭೆ ರಷ್ಯಾದ ಉಫಾ ದಲ್ಲಿ ನಡೆಯಲಿದೆ. ಈ ಸಂಘಟನೆಯಲ್ಲಿ ಪ್ರಸ್ತುತ 6 ದೇಶಗಳು ಸದಸ್ಯತ್ವ ಹೊಂದಿವೆ. ಅವುಗಳಲ್ಲಿ ರಷ್ಯಾ, ಚೀನಾ, ಕಝಕ್ ಸ್ತಾನ್,ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್ ಸೇರಿವೆ. ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ಭಾರತವೂ ಈ ಗುಂಪಿನ ಸದಸ್ಯತ್ವ ಪಡೆಯುವ ಸಂಭವವಿದೆ. ಇದು ಪ್ರಧಾನಿ ಪ್ರವಾಸದ ಪ್ರಮುಖ ಅಂಶ ಎನ್ನಲಾಗಿದೆ. ಸದ್ಯಕ್ಕೆ ಭಾರತ ಕೇವಲ 'ವೀಕ್ಷಕ' ದೇಶವಾಗಿ ಭಾಗವಹಿಸುತ್ತಿದೆ.
ಬ್ರಿಕ್ಸ್ ಸಂಘಟನೆಯ ಸದಸ್ಯ ದೇಶಗಳಾದ ಬ್ಫಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಗಳು ಬ್ರಿಕ್ಸ್ ಸಮ್ಮೇಳನದಲ್ಲಿ ತಮ್ಮೊಳಗೆ ಆರ್ಥಿಕ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ಧಿ ಮತ್ತು ಸ್ಥಳೀಯ ಕರನ್ಸಿಗಳಲ್ಲಿ ವ್ಯಾಪಾರ ನಡೆಸುವ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಕಳೆದ ವರ್ಷ ಬ್ರಜಿಲ್ ನಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಈಗಾಗಲೇ ಸ್ಥಾಪನೆಯಾಗಿದ್ದು, ಸದಸ್ಯ ದೇಶಗಳಿಗೆ ಸ್ಥಳೀಯ ಕರೆನ್ಸಿಯಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆಯೂ ಸಭೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮೊದಲ 6 ವರ್ಷಗಳಿಗೆ ಭಾರತ ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಹಕ್ಕು ಪಡೆದಿದ್ದು, ಐಸಿಐಸಿಐ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರು ಇದರ ಪ್ರಥಮ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಮಧ್ಯ ಏಷಿಯಾ ದೇಶಗಳಿಗೆ ಒಟ್ಟಿಗೇ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿ ಮೋದಿಯವರಾಗಿದ್ದು, ಈ ದೇಶಗಳೊಂದಿಗೆ ಇಂಧನ, ವ್ಯವಹಾರ ವೃದ್ಧಿ ಮತ್ತು ರಕ್ಷಣಾ ವಿಷಯಗಳಲ್ಲಿ ಪರಸ್ಪರ ಒಪ್ಪಂದಗಳನ್ನು ಮಾಡಿಕೊೞುವ ಇರಾದೆ ಹೊಂದಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಕಳೆದ ವಾರ ತಿಳಿಸಿತ್ತು.
ತುರ್ಕ್ಮೇಮೇನಿಸ್ತಾನ್-ಅಫ್ಘಾನಿಸ್ತಾನ್-ಪಾಕಿಸ್ತಾನ್-ಇಂಡಿಯಾ (TAPI) ಗಳ ಮಧ್ಯೆ ಅನಿಲ ಪೈಪ್ ಲೈನ್ ಯೋಜನೆಗೂ ಒಪ್ಪಂದ ಏರ್ಪಡುವ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಈ ನಾಲ್ಕು ದೇಶಗಳ ಮಧ್ಯೆ ಹಾದು ಹೋಗುವ ಗ್ಯಾಸ್ ಪೈಪ್ ಲೈನ್ ಯೋಜನೆಯಿಂದ ಭಾರತದ ಇಂಧನದ ಅಗತ್ಯತೆ ನೀಗಲು ಸಾಕಷ್ಟು ಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತ-ಪಾಕಿಸ್ತಾನಗಳ ನಡುವೆ ಭಿನ್ನಾಭಿಪ್ರಾಯ ಸೇರಿದಂತೆ ಸಾವಿರಾರು ಕಿಲೋಮೀಟರ್ ಉದ್ದದ ಪೈಪ್ ಲೈನ್ ಯೋಜನೆ ಸುರಕ್ಷಾ ದೃಷ್ಟಿಯಿಂದಲೂ ಅಪಾಯಕಾರಿ ಎಂಬ ಕಾರಣಕ್ಕಾಗಿ ಈವರೆಗೆ ನೆನೆಗುದಿಗೆ ಬಿದ್ದಿತ್ತು.