BW News Bureau : ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕೆಂದು ಪ್ರಯತ್ನಿಸಿ ರಾಜ್ಯ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 3 ರಂದು ನಡೆಯಲಿದೆ. ಸರ್ಕಾರದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದ್ದು, ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
2011ರ ಜನಗಣತಿ ಆಧಾರದ ಮೇಲೆ ಹೊಸ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಸೋಮವಾರ ಮೇಲ್ಮನವಿ ಸಲ್ಲಿಸಿತ್ತು.
ಜುಲೈ 28 ರಂದು ಬಿಬಿಎಂಪಿ ಚುನಾವಣೆ ನಡೆಸಲಾಗುವುದೆಂದು ಚುನಾವಣಾ ಆಯೋಗವು ಘೋಷಣೆ ಮಾಡಿದೆ. ಆದರೆ ಅಧಿಸೂಚನೆ ಹೊರಡಿಸಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರ, 2001 ಮತ್ತು 2011ರ ಜನಗಣತಿಗೂ ಸಾಕಷ್ಟು ವ್ಯತ್ಯಾಸಗಳಿವೆ, ಈಗ 2001 ಜನಗಣತಿ ಪ್ರಕಾರ ಮೀಸಲಾತಿ ನಿಗದಿಪಡಿಸಿರುವುದರಿಂದ ಹಲವು ವರ್ಗಗಳಿಗೆ ಅನ್ಯಾಯವಾಗಲಿದೆ. ಇದನ್ನು ಸರಿಪಡಿಸಲು 2011ರ ಜನಗಣತಿ ಪ್ರಕಾರ ಮೀಸಲಾತಿ ಪಟ್ಟಿಯನು ಪರಿಷ್ಕರಿಸಬೇಕಾಗಿದೆ. ಪರಿಷ್ಕೃತ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದೆ.