Untitled Document
Sign Up | Login    
Dynamic website and Portals
  
June 26, 2015

ಸ್ಮಾರ್ಟ್ ಸಿಟಿ ಯೋಜನೆ: ನಗರ ಸವಾಲು ಸ್ಪರ್ಧೆ ಮೂಲಕ ಅರ್ಹ ನಗರಗಳ ಆಯ್ಕೆ

ನರೇಂದ್ರ ಮೋದಿ ನರೇಂದ್ರ ಮೋದಿ

ನವದೆಹಲಿ : ನಗರಾಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುವ, ಕೇಂದ್ರದ ಎನ್‌.ಡಿ.ಎ ಸರ್ಕಾರದ ದೂರದೃಷ್ಟಿಯ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಐದು ವರ್ಷಗಳಲ್ಲಿ 100 ಸ್ಮಾರ್ಟ್‌ ಸಿಟಿ ನಿರ್ಮಾಣ ಯೋಜನೆ, 500 ನಗರಗಳ ಪುನರುಜ್ಜೀವನಕ್ಕೆ ’ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆ' (ಅಮೃತ್‌) ಹಾಗೂ ನಗರಪ್ರದೇಶಗಳಲ್ಲಿ ಏಳು ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಾಣ ಮಾಡುವ ’ಸರ್ವರಿಗೂ ವಸತಿ' ಕಾರ್ಯಕ್ರಮಗಳಿಗೆ ಮೋದಿ ಅವರು ನಿಶಾನೆ ತೋರಿದರು. ಇದೇ ವೇಳೆ ಈ ಮೂರೂ ಯೋಜನೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ದೇಶವಾಸಿಗಳಲ್ಲಿ ಹೊಸ ಕಲ್ಪನೆಯನ್ನು ಬಿತ್ತಿರುವ ಸ್ಮಾರ್ಟ್‌ ಸಿಟಿ ಯೋಜನೆಗಳಿಗೆ ’ನಗರ ಸವಾಲು ಸ್ಪರ್ಧೆ' ಮೂಲಕ ಅರ್ಹ ನಗರಗಳನ್ನು ಆಯ್ಕೆ ಮಾಡಲಾಗುತ್ತದೆ. ನೈರ್ಮಲ್ಯ, ಶುದ್ಧ ಕುಡಿವ ನೀರು, ವಿದ್ಯುತ್‌, ಹಸಿರು ಪ್ರಮಾಣ ಹಾಗೂ ಕಂದಾಯ- ವೆಚ್ಚ ಅನುಪಾತ ವಿಚಾರಗಳಲ್ಲಿ ತೇರ್ಗಡೆ ಹೊಂದುವ ನಗರಗಳು ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿಗೊಳ್ಳುತ್ತವೆ. ಸ್ಮಾರ್ಟ್‌ ಸಿಟಿಯಾಗಿ ಆಯ್ಕೆಯಾಗುವ ನಗರಕ್ಕೆ ಐದು ವರ್ಷಗಳ ಕಾಲ ವರ್ಷಕ್ಕೆ 100 ಕೋಟಿ ರೂ.ನಂತೆ ಹಣ ಲಭಿಸಲಿದೆ.

ಕೇಂದ್ರ ಸರ್ಕಾರದ ಮೂರು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಘನ ತ್ಯಾಜ್ಯ ನಿರ್ವಹಣೆಗೆ ಕರ್ನಾಟಕ ಕೈಗೊಂಡಿರುವ ಪ್ರಯತ್ನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಅನುಕರಿಸುವಂತೆ ದೇಶದ ಇತರೆ ರಾಜ್ಯಗಳಿಗೂ ಸಲಹೆ ಮಾಡಿದರು.

’ಹೈದರಾಬಾದ್‌ನ ತೆರಿಗೆ ಸಂಗ್ರಹ ವ್ಯವಸ್ಥೆ, ಕರ್ನಾಟಕದ ಘನ ತ್ಯಾಜ್ಯ ನಿರ್ವಹಣೆ ಪ್ರಯತ್ನ, ಛತ್ತೀಸಗಢದ ಬಯಲು ಮುಕ್ತ ಶೌಚಾಲಯ ಯೋಜನೆಗಳನ್ನು ದೇಶಾದ್ಯಂತ ಅನುಕರಿಸಬೇಕು' ಎಂದು ಮೋದಿ ಅವರು ತಿಳಿಸಿದರು.

ಸ್ಮಾರ್ಟ್‌ ಸಿಟಿ ನಿಯಮಾವಳಿಃ-

ಯೋಜನೆಗೆ ಎರಡು ಹಂತಗಳಲ್ಲಿ ನಗರಗಳನ್ನು ಆಯ್ಕೆ ಮಾಡಬೇಕು. ರಾಜ್ಯಗಳು ತಮ್ಮಲ್ಲಿನ ನಗರಗಳಿಗೆ ಅಂಕ ನೀಡಿ, ಹೆಚ್ಚು ಅಂಕ ಗಳಿಸುವ ನಗರಗಳನ್ನು ಆದ್ಯತೆಯ ಮೇರೆಗೆ ಮೊದಲ ಮತ್ತು ಎರಡನೇ ಹಂತಕ್ಕೆ ಶಿಫಾರಸು ಮಾಡಬೇಕು.

ಈ ಯೋಜನೆಯಡಿ ಕೇಂದ್ರ ಸರ್ಕಾರ ನೀಡಲಾಗುವ ಹಣವನ್ನು ಬಹುಪಾಲು ಜನರಿಗೆ ಉಪಯೋಗವಾಗುವಂತಹ ಮೂಲಸೌಕರ್ಯ ಯೋಜನೆಗಳಿಗೆ ಮಾತ್ರ ಬಳಸಬೇಕು.

ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಅನುಪಾತದಡಿ ವಿಶೇಷ ಉದ್ದೇಶದ ವಾಹಕವೊಂದನ್ನು ಸ್ಥಾಪಿಸಬೇಕು.

ಯಾವುದೇ ಪ್ರದೇಶವನ್ನು ಮರುಮಾರ್ಪಾಡು ಮಾಡಬೇಕಾದರೆ ಅದು 500 ಎಕರೆ ವಿಸ್ತೀರ್ಣದ್ದಾಗಿರಬೇಕು. ಮರು ಅಭಿವೃದ್ದಿಪಡಿಸಬೇಕಾದರೆ ಅದು 50 ಎಕರೆಯ ಸ್ಥಳವಾಗಿರಬೇಕು. ಹೊಸದಾಗಿ ಯೋಜನೆ ಕೈಗೆತ್ತಿಕೊಳ್ಳುವುದಾದರೆ 250 ಎಕರೆ ಜಾಗ ಇರಲೇಬೇಕು.

ಸ್ಮಾರ್ಟ್‌ ಸಿಟಿಯಾಗುವ ನಗರದ ಶೇ.10ರಷ್ಟು ಇಂಧನ ಮೂಲ ನವೀಕರಿಸಬಹುದದ್ದಾಗಿರಬೇಕು. ಶೇ. 80ರಷ್ಟು ಕಟ್ಟಡ ನಿರ್ಮಾಣಗಳು ಹಸಿರು ಉದ್ದೇಶದಿಂದ ಕೂಡಿರಬೇಕು. ಹೊಸ ವಸತಿ ಯೋಜನೆಗಳಲ್ಲಿ ಶೇ.35ರಷ್ಟು ಭಾಗವನ್ನು ದುರ್ಬಲ ವರ್ಗದವರಿಗೆ ಮೀಸಲಿಡಬೇಕು.

ಆಯ್ಕೆಯಾಗುವ ನಗರಕ್ಕೆ ವಾರ್ಷಿಕ 100 ಕೋಟಿ ರೂ.ನಂತೆ 5 ವರ್ಷ ಹಂಚಿಕೆ

ಅಮೃತ್‌ ಯೋಜನೆ ನಿಯಮಾವಳಿಃ-

ತೆರಿಗೆ ಸಂಗ್ರಹ ಸುಧಾರಣೆ, ಇ- ಆಡಳಿತ ಉತ್ತೇಜನ, ಜಿಐಎಸ್‌ ಆಧರಿತ ಕ್ರಿಯಾ ಯೋಜನೆ ನಕ್ಷೆ ತಯಾರಿ, ಸ್ವತ್ಛ ಭಾರತ ಮೈಲಿಗಲ್ಲು ತಲುಪುವುದು ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ 11 ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕು.

ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ಏಳು ದಿವಸದೊಳಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಗಳು ಹಣ ಮಂಜೂರು ಮಾಡಬೇಕು.

ಸರ್ವರಿಗೂ ವಸತಿ ನಿಯಮಾವಳಿಃ-

ಈ ಯೋಜನೆಯಡಿ ನಿರ್ಮಿಸಲಾಗುವ ಮನೆಗಳ ಹಕ್ಕನ್ನು ಮಹಿಳೆ ಅಥವಾ ಮಹಿಳೆ- ಪುರುಷರ ಜಂಟಿ ಹೆಸರಿನಲ್ಲಿ ನೀಡಬೇಕು.

ಆರ್ಥಿಕ ದುರ್ಬಲ ವರ್ಗದವರಿಗೆ ನಿರ್ಮಿಸಲಾಗುವ ಮನೆಗಳು 30 ಚದರ ಮೀಟರ್‌ ಬಳಕೆ ಪ್ರದೇಶವನ್ನು ಹೊಂದಿರಬೇಕು.

ಪ್ರತಿ ಮನೆಗೆ ಸರ್ಕಾರ 1 ಲಕ್ಷ ರೂ. ಒದಗಿಸಲಿದೆ. ಅದನ್ನು ರಾಜ್ಯ ಸರ್ಕಾರಗಳು ಕೊಳಗೇರಿ ಮರುಅಭಿವೃದ್ಧಿಗೂ ಬಳಸಿಕೊಳ್ಳಬಹುದು.

ಫ‌ಲಾನುಭವಿಗಳಿಗೆ ಸಾಲ ಮಂಜೂರಾಗುತ್ತಿದ್ದಂತೆ ಶೇ.6.50 ಗೃಹ ಸಾಲ ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತದೆ.

ಈ ಯೋಜನೆಗಳು ಜನರ ಆಶೋತ್ತರಗಳಿಗಿಂತ ಒಂದು ಅಥವಾ ಎರಡು ಹೆಜ್ಜೆ ಮುಂದಿರಲಿವೆ. ಹೊಸ ಮೂರು ಯೋಜನೆಗಳಿಂದ ನಾವು ಮುನ್ನಡೆಯಬಹುದು. ಒಂದು ನಗರ ಯಾವ ರೀತಿ ಬೆಳೆಯಬೇಕು ಎಂಬುದನ್ನು ಖಾಸಗಿ ಡೆವಲಪರ್‌ಗಳು ನಿರ್ಧರಿಸುವಂತಾಗಬಾರದು. ಈ ಕುರಿತು ನಾಗರಿಕರು ಹಾಗೂ ನಗರ ನಾಯಕತ್ವವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited