ನವದೆಹಲಿ : ಜೂ.21ರಂದು ನಡೆಯಲಿರುವ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿವಿಧ ಮುಸ್ಲಿಂ ಧಾರ್ಮಿಕ ಸಂಘಟನೆಗಳು ವಿರೋಧ ಮಾಡಿರುವ ಬೆನ್ನಲ್ಲೇ ದೇಶದ ಪ್ರಮುಖ ಮುಸ್ಲಿಂ ಮಂಡಳಿಗಳಲ್ಲಿ ಒಂದಾದ ದಾರುಲ್ ಉಲೆಮಾ ಬಹಿರಂಗವಾಗಿ ಬೆಂಬಲ ಸೂಚಿಸಿದೆ.
ಉತ್ತರ ಪ್ರದೇಶದ ದೀಯೊಬಂದ್ ನ ದಾರುಲ್ ಉಲೆಮಾದ ಉನ್ನತ ಮಟ್ಟದ ಸಮಿತಿಯ ಮೌಲ್ವಿಗಳು ಈ ಬಗ್ಗೆ ಹೇಳಿಕೆ ನೀಡಿದ್ದು 'ಯೋಗ ಒಂದು ಶಾರೀರಿಕ ವ್ಯಾಯಾಮವಷ್ಟೆ. ಇದನ್ನು ಧರ್ಮದ ಜೊತೆಗೆ ತಳುಕು ಹಾಕುವುದು ಸರಿಯಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಯೋಗ ದಿನಾಚರಣೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳದಂತೆ ಯಾವುದೇ ಫತ್ವಾ ಹೊರಡಿಸಿಲ್ಲ, ಯಾರೂ ಬೇಕಾದರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೆ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರನ್ನು ಭೇಟಿಯಾಗಿರುವ ಮೌಲ್ವಿಗಳು ಯೋಗ ದಿನಾಚರಣೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.