ಪಾಟ್ನಾ : ನೆಸ್ಲೆ ಕಂಪನಿಯ ಮ್ಯಾಗಿ ಬ್ರ್ಯಾಂಡ್ ಗೆ ಸಂಬಂಧಿಸಿದಂತೆ, ಮ್ಯಾಗಿ ಜಾಹೀರಾತಿನಲ್ಲಿ ಪ್ರಚಾರದ ರಾಯಬಾರಿಗಳಾಗಿ ಪಾಲ್ಗೊಂಡಿದ್ದ ಬಾಲಿವುಡ್ ತಾರೆಗಳಾದ ಅಮಿತಾಬ್ ಬಚನ್, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಹಾಗೂ ಮ್ಯಾಗಿ ಕಂಪೆನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಕೂಡಲೇ ಎಫ್.ಐ.ಆರ್ ದಾಖಲಿಸಬೇಕು ಎಂದು ಬಿಹಾರದ ಮುಜಾಫರ್ ಪುರ ಜಿಲ್ಲಾ ನ್ಯಾಯಾಲಯವೊಂದು ಪೊಲೀಸರಿಗೆ ನಿರ್ದೇಶನ ನೀಡಿದೆ.
ಈ ಐವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಅವರನ್ನು ತನಿಖೆಗೆ ಗುರಿಪಡಿಸಬೇಕು, ದೂರನ್ನು ಆಧರಿಸಿ ಅಗತ್ಯವೆನಿಸಿದರೆ ಬಂಧಿಸಬೇಕು ಎಂದು ಮುಜಾಫರ್ ಪುರ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ರಾಮಚಂದ್ರ ಪ್ರಸಾದ್ ಅವರು ಇಲ್ಲಿನ ಖಾಜಿ ಮಹಮ್ಮದ್ ಪುರ ಠಾಣಾ ಪೊಲೀಸ್ ರಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
ನ್ಯಾಯವಾದಿ ಸುಧೀರ್ ಕುಮಾರ್ ಓಝಾರವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಂತರ ಈ ನಿರ್ದೇಶನ ನೀಡಿರುವ ನ್ಯಾಯಾಲಯ ತನಿಖೆ ವೇಳೆ ಅಗತ್ಯವೆನಿಸಿದರೆ ಅವರನ್ನು ಬಂಧಿಸಬೇಕು ಎಂದು ಹೇಳಿದರು.
ನೆಸ್ಲೆ ಕಂಪನಿಯ ಮ್ಯಾಗಿ ನ್ಯೂಡಲ್ಸ್ ನಲ್ಲಿ ಮಾನೋಸೋಡಿಯಂ ಗುಟ್ಲ್ ಮೇಟ್ ಹಾಗೂ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಈ ವಿಷಕಾರಿ ಅಂಶಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಲಿದೆ ಎಂಬುದು ಇದೀಗ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದ್ದು, ಬಿಹಾರ, ಉತ್ತರ ಪ್ರದೇಶದ ಕೆಲ ವಕೀಲರು ವಿವಾದಿತ ಮ್ಯಾಗಿ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದು, ಅಲ್ಲದೆ ಸಂಸ್ಥೆಯ ಪ್ರಚಾರ ರಾಯಭಾರಿಗಳಾಗಿರುವ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಹಾಗೂ ಪ್ರೀತಿ ಝಿಂಟಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.