ಮುಂಬೈ : ನೂರು ಜನ ರಾಹುಲ್ ಗಾಂಧಿಗಳೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಲಾರರು ಎಂದು ಶಿವಸೇನೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿಯವರ ಛರಿಸ್ಮಾದ ಮುಂದೆ ರಾಹುಲ್ ಗಾಂಧಿ ಏನೇನೂ ಅಲ್ಲ ಎಂದು ಹೇಳಿದೆ.
ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರದ್ದು ಸೂಟು ಬೂಟಿನ ಸರ್ಕಾರ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ವಿರುದ್ಧ ಕಟುವಾಗಿ ಟೀಕಿಸಿರುವ ಶಿವಸೇನೆ, ಸೂಟ್ ಕೇಸ್ ಗಿಂತ ಇಂತಹ ಸೂಟ್ ಬೂಟ್ ಸರ್ಕಾರವೇ ತುಂಬಾ ಉತ್ತಮ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಸುಮಾರು 56 ದಿನಗಳ ಕಾಲ ಕಣ್ಮರೆಯಾದ ನಂತರ ದೇಶಕ್ಕೆ ವಾಪಸ್ ಆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ಹೊಸ ಅವತಾರ ಎಂಬಂತೆ ಮಾತನಾಡಲು ಆರಂಭಿಸಿದ್ದಾರೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.