ಬೆಂಗಳೂರು : ಪಿಯುಸಿ ತರಗತಿಗಳು ಆರಂಭವಾಗಿದ್ದರೂ ಪಠ್ಯಕ್ರಮದ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಾಜ್ಯಾದ್ಯಂತ 2015-16ನೇ ಸಾಲಿನ ದ್ವಿತೀಯ ಪಿಯು ಜೂ.1ರಿಂದ ಹಾಗೂ ಪ್ರಥಮ ಪಿಯು ತರಗತಿಗಳು ಜೂ.15ರಿಂದ ಆರಂಭವಾಗಲಿವೆ. ಆದರೆ ವಿಜ್ನಾನ ವಿಭಾಗದ ವಿದ್ಯಾರ್ಥಿಗಳಿಗೆ ಯಾವ ಪಠ್ಯಕ್ರಮ ಅಳವಡಿಸಬೇಕೆಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ವಿಪರ್ಯಾಸ. ಈ ಹಿನ್ನಲೆಯಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.
ವಿಜ್ನಾನ ವಿದ್ಯಾರ್ಥಿಗಳಲಿಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್.ಸಿ.ಇ.ಆರ್.ಟಿ) ಸಿದ್ಧಪಡಿಸಿರುವ ಪಠ್ಯಕ್ಕೆ ಅನುಸಾರವಾಗಿ ತಾನು ಸಿದ್ಧಪಡಿಸಿದ ಬ್ಲೋ ಅಪ್ ಸಿಲಬಸ್ ಅನ್ನೇ ಮುಂದುವರೆಸಬೇಕೆ ಅಥವಾ ಎನ್.ಸಿ.ಇ.ಆರ್.ಟಿ ಪೂರ್ಣ ಪಠ್ಯಕ್ರಮವನ್ನು ಬೋಧಿಸಬೇಕೇ ಎಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಂತಿಮ ನಿರ್ಣಯ ಕೈಗೊಂಡಿಲ್ಲ.
2015ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ನಾನ ವಿಭಾಗದಲ್ಲಿ ಶೇ.65.19ಫಲಿತಾಂಶ ಬಂದಿದೆ. ಬ್ಲೋ ಅಪ್ ಸಿಲಬಸ್ ಪ್ರಕಾರ ಪರೀಕ್ಷೆ ನಡೆಸಿರುವುದೇ ಇದಕ್ಕೆ ಕಾರಣ. ಈ ವರ್ಷದ ಪಠ್ಯಕ್ರಮದ ಬಗ್ಗೆ ಉಪನ್ಯಾಸಕರಿಗೆ ಇನ್ನೂ ಸ್ಪಷ್ಟ ವ್ಸೂಚನೆ ನೀಡಲಾಗಿಲ್ಲ.
ಬ್ಲೋ ಅಪ್ ಸಿಲಬಸ್ ಅನ್ನೇ ಈ ವರ್ಷವೂ ಮುಂದುವರೆಸುವುದಾದರೇ ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಇಲಾಖೆಯ ಮೂಲಗಳ ಪ್ರಕಾರ ಈವರೆಗೂ ಅಧಿಕೃತ ಅನುಮೋದನೆ ಪಡೆದಿಲ್ಲ.