ಗಯಾ : ಬಿಹಾರದ ಗಯಾದ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷರ ಮನೆಗೆ ಪಾರ್ಸೆಲ್ ನಲ್ಲಿ ಕಳುಹಿಸಲಾದ ಬಾಂಬ್ ಸಿಡಿದು ಮನೆ ಕೆಲಸದಾಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಜೆಡಿಯು ಜಿಲ್ಲಾಧ್ಯಕ್ಷ ಅಭಯ್ ಕುಶ್ವಾಹ ಅವರ ಮನೆಗೆ ಪಾರ್ಸೆಲ್ ಬಂದಿದ್ದು, ಅದನ್ನು ಬೆಳಗ್ಗೆ ಕೆಲಸದಾಳು ಸಂತೋಷ್ ಕುಮಾರ್ ಎನ್ನುವವನು ತೆರೆದ ವೇಳೆ ಬಾಂಬ್ ಏಕಾಏಕಿ ಸಿಡಿದಿದೆ. ಪರಿಣಾಮವಾಗಿ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊರ್ವ ಗಾಯಗೊಂಡಿದ್ದಾನೆ.
ಘಟನೆ ನಡೆಯುವ ವೇಳೆ ಕುಶ್ವಾಹ ಅವರು ದೆಹಲಿಯಲ್ಲಿದ್ದುದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಬಾಂಬ್ ಕಳುಹಿಸಿದವರ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಕುಶ್ವಾಹ ಅವರನ್ನು ಗುರಿಯಾಗಿರಿಸಿಕೊಂಡು ಬಾಂಬ್ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.