ಪಾಟ್ನಾ : ಬಿಹಾರದ ಗಯಾ ಜಿಲ್ಲೆಯಲ್ಲಿ ನಕ್ಸಲೀಯರು 32 ವಾಹನಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿರುವ ಘಟನೆ ನಡೆದಿದೆ.
ಮಹಿಳಾ ನಕ್ಸಲ್ ಲೀಡರ್ ಅನ್ನು ಪೊಲೀಸರು ಎನ್ ಕೌಂಟರ್ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ನಕ್ಸಲೀಯರು ಎರಡು ದಿನಗಳ ಬಂದ್ ಗೆ ಕರೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಗಯಾದ ಜನನಿಭಿಡ ಪ್ರದೇಶವಾದ ಗ್ರ್ಯಾಂಡ್ ಟ್ರುಂಕ್ ರಸ್ತೆಯಲ್ಲಿ ಶಸ್ತ್ರ ಸಜ್ಜಿತ ಮಾವೋವಾದಿಗಳ ಗುಂಪು ವಾಹನಗಳನ್ನು ಬಲವಂತವಾಗಿ ತಡೆದು ನಿಲ್ಲಿಸಿ, ನಂತರ ಅವುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.
ಸುಮಾರು ಎರಡು ಡಜನ್ ಗೂ ಅಧಿಕ ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ನಕ್ಸಲೀಯರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ಗಯಾದ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ವಾಹನಗಳಿಗೆ ಬೆಂಕಿ ಹಚ್ಚುವ ಮುನ್ನ ವಾಹನದಲ್ಲಿದ್ದವರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದಾರೆ ಎಂದು ವಿವರಿಸಿದ್ದಾರೆ.
ಕಳೆದ ವಾರ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಕ್ಸಲ್ ಮಹಿಳಾ ಕಮಾಂಡರ್ ಸಾವನ್ನಪ್ಪಿದ್ದು, ಇದನ್ನು ಖಂಡಿಸಿ ನಕ್ಸಲೀಯರು ಸೋಮವಾರದಿಂದ 2 ದಿನಗಳ ಬಂದ್ ಗೆ ಕರೆ ನೀಡಿದ್ದರು.